ವೀರಾಜಪೇಟೆ, ಮೇ 28: ವೀರಾಜಪೇಟೆಯಲ್ಲಿರುವ ತಾಲೂಕಿನ ಪ್ರತಿಷ್ಠಿತ ಸಹಕಾರ ಸಂಘಗಳಲ್ಲೊಂದಾದ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದಲ್ಲಿ (ಎ.ಪಿ.ಸಿ.ಎಂ.ಎಸ್ ನಿ..) ಸುಮಾರು ಮೂರು ವರ್ಷಗಳ ಅವಧಿಯಲ್ಲಿ ರೂ 66.77 ಲಕ್ಷ ಹಣ ದುರುಪಯೋಗವಾಗಿದೆ ಎಂದು ಸಂಘದ ಆಡಳಿತ ಮಂಡಳಿ ನಗರ ಪೊಲೀಸರಿಗೆ ದಾಖಲೆ ಸಮೇತ ನೀಡಿದ ದೂರಿನ ಮೇರೆ ಪೊಲೀಸರು ಸಂಘದ ಗೊಬ್ಬರ ಹಾಗೂ ಹತ್ಯಾರು ವಿಭಾಗದ ಗುಮಾಸ್ತ ಪಾರಾಣೆಯ ಎಂ.ಯು ಅಚ್ಚಯ್ಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಸಂಘದಲ್ಲಿ ಈ ಭಾರೀ ಮೊತ್ತದ ಹಣ ದರುಪಯೋಗದ ನಂತರ ಗುಮಾಸ್ತ ಎಂ.ಯು.ಅಚ್ಚಯ್ಯ ತಾ: 23-9-2016ರಿಂದ ಕೆಲಸಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ಆಡಳಿತ ಮಂಡಳಿಯ ನಿರ್ಧಾರದಂತೆ ಆತನಿಗೆ ಶೋಕಾಸ್ ನೋಟೀಸ್ ನೀಡಿದರೂ ಅದಕ್ಕೆ ಉತ್ತರ ನೀಡದ್ದರಿಂದ ತಾ. 8ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ದುರುಪಯೋಗದ ಹಣ ವಸೂಲಾತಿಗಾಗಿ ಪೊಲೀಸರಿಗೆ ದೂರು ನೀಡುವಂತೆ ಸಭೆಯ ನಿರ್ಧಾರದ ಮೇರೆ ನಗರ ಪೊಲೀಸರಿಗೆ ದೂರು ನೀಡಲಾಗಿದೆ.

ಸಂಘದ ಆಡಳಿತ ಮಂಡಳಿ, ಮೊದಲು ಪೊಲೀಸರಿಗೆ ದೂರು ನೀಡಿದಾಗ ದುರುಪಯೋಗವಾದ ದಾಖಲೆಗಳನ್ನು ಹಾಜರು ಪಡಿಸುವಂತೆ ಸೂಚನೆ ನೀಡಿದ ಮೇರೆ ಸಂಘದ ದಾಖಲೆಗಳ ಪ್ರತಿಗಳÀ ಆಧಾರದ ಮೇಲೆ ಪೊಲೀಸರು ಅಚ್ಚಯ್ಯನ ವಿರುದ್ಧ ಭಾರತ ದಂಡ ಸಂಹಿತೆ 408, 401, 420,465, 468,471 ಹಾಗೂ 477 ಎ, ಪ್ರಕಾರವಾಗಿ ಹಣ ದುರುಪಯೋಗದ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಆಡಳಿತ ಮಂಡಳಿಯ (ಮೊದಲ ಪುಟದಿಂದ) ಬರಬೇಕಾಗಿದೆ. ಕಳೆದ ಮೂರು ವರ್ಷಗಳಿಂದಲೂ ಸಂಘದ ವ್ಯವಸ್ಥಾಪಕರಾಗಿರುವ ವಿಶ್ವನಾಥ್ ಅವರು ಹಣ ದುರುಪಯೋಗದ ಪ್ರಕರಣವನ್ನು ಆಡಳಿತ ಮಂಡಳಿಯ ಗಮನಕ್ಕೆ ತರದಿರಲು ಕಾರಣವೇನು, ಹಣ ದುರುಪಯೋಗದಲ್ಲಿ ವ್ಯವಸ್ಥಾಪಕ ಸೇರಿದಂತೆ ಇನ್ನು ಯಾರೆಲ್ಲ ಶಾಮೀಲಾಗಿದ್ದಾರೆ ಎಂಬದನ್ನು ಆಡಳಿತ ಮಂಡಳಿಯ ದೂರಿನ ಮೇರೆ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈಗ ನಾಪತ್ತೆಯಾಗಿರುವ ಅಚ್ಚಯ್ಯ 1-4-20013ರಿಂದಲೇ ನಕಲಿ ಬಿಲ್ ಸೃಷ್ಠಿ ಮಾಡಿ ಗೊಬ್ಬರ ಹಾಗೂ ಹಾರ್ಡ್‍ವೇರ್ ಸಾಮಗ್ರಿಗಳನ್ನು ವಿಲೇವಾರಿ ಮಾಡುತ್ತಿದ್ದುದು, ಸಂಘದ ಪ್ರತಿ ವರ್ಷ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ವ್ಯವಸ್ಥಾಪಕ ವಿಶ್ವನಾಥ್ ಅವರಿಗೆ ಮೂರು ವರ್ಷಗಳಿಂದ ಗೊತ್ತಿದ್ದರೂ, ಇದನ್ನು ಆಡಳಿತ ಮಂಡಳಿಗೆ ತಿಳಿಸದೆ ಗುಪ್ತವಾಗಿಡಲು ಕಾರಣವೇನು ಎಂಬದು ಸಂಶಯ ಮೂಡುವಂತಾಗಿದೆ. ವೀರಾಜಪೇಟೆಯ ಎ.ಪಿ.ಸಿ.ಎಂ.ಎಸ್. ವರ್ಷಕ್ಕೆ ಕೋಟ್ಯಾಂತರ ವಹಿವಾಟು ನಡೆಸುತ್ತಿದ್ದು, ಸಂಘವು ಅರ್ಹ ಫಲಾನುಭವಿ ರೈತರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಹಣ ದುರುಪಯೋಗದಿಂದಾಗಿ ಸಹಕಾರ ಸಂಘದ ವ್ಯವಹಾರಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ಸಂಘದ ಮಾಜಿ ನಿರ್ದೇಶಕರು ದೂರಿದ್ದಾರೆ.

ವೀರಾಜಪೇಟೆ ನಗರ ಪೊಲೀಸರ ತಂಡ ಈಗ ಅಚ್ಚಯ್ಯ ಅವರ ಶೋಧಕ್ಕೆ ತೊಡಗಿರುವದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.