ಮಡಿಕೇರಿ, ಮೇ 29: ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಭಾರತೀಯ ಸೇನಾ ನೇಮಕಾತಿ ರ್ಯಾಲಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ನಾಲ್ಕು ವರ್ಷದ ನಂತರ ನಗರದಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯುತ್ತಿದೆ. ಕೊಡಗಿನ ಜನರು ಸೇನಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ ಸೈನಿಕ ಶಾಲೆಯು ಸಹ ಇದೆ. ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗುವಂತಾಗಬೇಕು ಎಂದರು. ಬ್ರಿಗೇಡಿಯರ್ ಭಾಜ್ವ ಮಾತನಾಡಿ ಸೇನಾ ನೇಮಕಾತಿ ರ್ಯಾಲಿಗೆ ಸುಮಾರು 5,533 ಮಂದಿ ಯುವಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ಸೈನಿಕ ಗುಮಾಸ್ತ, ಉಗ್ರಾಣ ಪಾಲಕ (ತಾಂತ್ರಿಕ), ಸೈನಿಕ ಸಾಮಾನ್ಯ ಕರ್ತವ್ಯ, ಶ್ರುಶ್ರೂಷಕ ಸಹಾಯಕ, ಪಶುವೈದ್ಯ, ಸೈನಿಕ ಟ್ರೇಡ್‍ಮೆನ್, ಸೈನಿಕ ತಾಂತ್ರಿಕ ಹುದ್ದೆಗಳಿಗೆ ರ್ಯಾಲಿ ನಡೆಯಲಿದೆ.

ರಾಜ್ಯದ ಕೊಡಗು, ಮೈಸೂರು, ಹಾಸನ, ಚಾಮರಾಜನಗರ, ಕೋಲಾರ, ಬೆಂಗಳೂರು, ಮಂಡ್ಯ, ಬಳ್ಳಾರಿ, ರಾಮನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

ದೇಹದಾಢ್ರ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವದು. ಬಳಿಕ ಜುಲೈ ತಿಂಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವದು.

ಸೇನಾ ನೇಮಕಾತಿ ರ್ಯಾಲಿ ಆರಂಭದಲ್ಲಿ 30 ಸಾವಿರ ರೂ.ಗೂ ಹೆಚ್ಚು ವೇತನ ದೊರೆಯಲಿದೆ. ಸಿಪಾಯಿಯಿಂದ ಸುಬೇದಾರ್ ಮೇಜರ್‍ವರೆಗೆ ಮತ್ತು ಸೇನೆಯ ಉನ್ನತ ಸ್ಥಾನ ಕ್ಯಾಪ್ಟನ್‍ವರೆಗೆ ಗೆಜೆಟೆಡ್ ಅಧಿಕಾರಿಯಾಗಿ ಬಡ್ತಿ ಮಾಡಲಾ ಗುತ್ತದೆ.

ರಣರಂಗ ಸೀಮಾ ಮತ್ತು ಉತ್ತುಂಗ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚುವರಿ ಭತ್ಯೆ, ವರ್ಷದಲ್ಲಿ ಒಂದು ಬಾರಿ ರೈಲಿನಲ್ಲಿ ಉಚಿತ ಪ್ರಯಾಣ, ರಜೆಯಲ್ಲಿ ಶೇ. 50 ರಷ್ಟು ರಿಯಾಯಿತಿ, ಉಚಿತ ಪಡಿತರ, ವೈದ್ಯಕೀಯ ಸೌಲಭ್ಯ, ಕ್ಯಾಂಟೀನ್ ಸೌಲಭ್ಯಗಳು ದೊರೆಯಲಿವೆ.

(ಮೊದಲ ಪುಟದಿಂದ) ಲಿಖಿತ ಪರೀಕ್ಷೆಯಲ್ಲಿ ಎನ್.ಸಿ.ಸಿ. ಪ್ರಮಾಣ ಪತ್ರ ಹೊಂದಿದ್ದ ಅಭ್ಯರ್ಥಿಗಳಿಗೆ ಸೈನಿಕ ಸಾಮಾನ್ಯ ಕರ್ತವ್ಯ ಮತ್ತು ಟ್ರೇಡ್‍ಮನ್ ಎಲ್ಲಾ ವರ್ಗದವರಿಗೆ ಲಿಖಿತ ಪರೀಕ್ಷೆಯಿಂದ ವಿನಾಯಿತಿಯಿದೆ ಎಂದು ತಿಳಿಸಿದರು. ಯುವಕರು ಭಾರತೀಯ ಸೇನೆ ಸೇರಲು ಉತ್ಸಾಹದಿಂದ ಪಾಲ್ಗೊಂಡಿದ್ದುದು ಕಂಡು ಬಂದಿತು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವದೇ ಪುಣ್ಯದ ಕೆಲಸ ಎಂದು ರ್ಯಾಲಿಯಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಹೇಳಿದ. ಕರ್ನಲ್ ನವರತನ್ ಸಿಬಿಯ, ಸೈನಿಕ ಮಂಡಳಿ ಜಂಟಿ ನಿರ್ದೇಶಕಿ ಗೀತಾ ಹಾಗೂ ಇತರರು ಇದ್ದರು.