ಮಡಿಕೇರಿ, ಮೇ 28: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ರಾಜ್ಯ ಸರಕಾರ ಈ ಹಿಂದೆ ವೇತನ ಹೆಚ್ಚಿಸಿದೆ. ಇನ್ನು ಹೋರಾಟ ಕೇಂದ್ರದ ಮೋದಿ ನೇತೃತ್ವದ ಸರಕಾರದೆಡೆಗೆ ಸಾಗಬೇಕಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಯರ ಮತ್ತು ಸಹಾಯಕಿಯರ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಟಿ.ಪಿ. ರಮೇಶ್ ಕರೆ ನೀಡಿದರು.ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ 17ನೇ ವರ್ಷದ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ರಾಜ್ಯ ಸರಕಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ವೇತನವನ್ನು ಹೆಚ್ಚಿಸಿದೆ. ಆದರೆ ಕೇಂದ್ರ ಸರಕಾರ ಬಜೆಟ್ ಸೇರಿದಂತೆ ಎಲ್ಲೂ ಕೂಡ ಅಂಗನವಾಡಿ ಕಾರ್ಯಕರ್ತರ ವೇತನವನ್ನು ಹೆಚ್ಚಿಸುವ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಇನ್ನು ಮುಂದೆ ಕೇಂದ್ರ ಸರಕಾರದ ಕಡೆ ಕಾರ್ಯಕರ್ತರ ಹೋರಾಟ ನಡೆಯಬೇಕಿದೆ ಎಂದರು.
ಅಬಲೆಯರನ್ನು ಮೇಲೆತ್ತುವ ಯಾವದೇ
(ಮೊದಲ ಪುಟದಿಂದ) ಕಾರ್ಯಕ್ರಮವನ್ನು ಕೇಂದ್ರ ಸರಕಾರ ಹಮ್ಮಿಕೊಳ್ಳದೇ ಇರುವದು ವಿಷಾದನೀಯ ಎಂದರು.
ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ನಂತರ ಬರಿಗೈಯಲ್ಲಿ ಮನೆಗೆ ತೆರಳುವವರು ಎಂದರೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಾತ್ರ ಎಂದು ವಿಷಾದÀ ವ್ಯಕ್ತ ಪಡಿಸಿದ ಅವರು, ಸಂಘಟಿತರಾಗಿ ನ್ಯಾಯಬದ್ಧವಾದ ಹೋರಾಟದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮುಮ್ತಾಜ್ ಮಾತನಾಡಿ, ಸ್ತ್ರೀ ಶಕ್ತಿಯನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಇಲಾಖೆ ಮೂಲಕ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯ ಎಂದರು.
ಶಿಶು ಅಭಿವೃದ್ಧಿ ಅಧಿಕಾರಿ ದಮಯಂತಿ ಮಾತನಾಡಿ, ಸಮಯಪ್ರಜ್ಞೆಯಿಂದ ಪ್ರತಿಯೊಬ್ಬರು ಕೆಲಸ ನಿರ್ವಹಿಸಿದ್ದಲ್ಲಿ ಯಾವದೇ ರೀತಿಯ ಸಮಸ್ಯೆಗಳು ಕಂಡು ಬರುವದಿಲ್ಲ. ಕೇವಲ ವೇತನಕ್ಕಾಗಿ ಕೆಲಸ ನಿರ್ವಹಿಸುವ ಬದಲು ಸಮಾಜ ಸುಧಾರಣೆ ದೃಷ್ಟಿಯಿಂದಲೂ ನಾವು ಕೆಲಸ ಮಾಡಬೇಕಾದ ಅಗತ್ಯವಿದೆ. ಈ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಸಮಾಜವನ್ನು ತಳಮಟ್ಟದಿಂದ ತಿದ್ದಲು ಸಾಕಷ್ಟು ಅವಕಾಶಗಳಿದೆ ಎಂದು ಅಭಿಪ್ರಾಯ ಪಟ್ಟರು.
2016 ಹಾಗೂ 17 ನೇ ಸಾಲಿನಲ್ಲಿ ಸೇವೆಯಿಂದ ನಿವೃತ್ತರಾದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಟಿ.ಪಿ. ರಮೇಶ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಸಂಘದ ಪದಾಧಿಕಾರಿ ದೇವಮ್ಮಾಜಿ ಪ್ರಾರ್ಥಿಸಿದರು. ಕಾರ್ಯದರ್ಶಿ ಪವಿತ್ರ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಲೆಕ್ಕಪತ್ರ ಮಂಡನೆ ವರದಿಯನ್ನು ವೀಣಾ ಕುಮಾರಿ, ಕ್ಷೇಮಾಭಿವೃದ್ಧಿ ನಿಧಿ ವರದಿಯನ್ನು ಸುಜಾತ ವಾಚಿಸಿದರು.
ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ನಾಗರತ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷೆ ಅಕ್ಕಮ್ಮ ಮತ್ತಿತರರು ವೇದಿಕೆಯಲ್ಲಿದ್ದರು.