ಮಡಿಕೇರಿ ಮೇ 29 : ಆನ್ಲೈನ್ ಮೂಲಕ ಔಷಧ ವ್ಯಾಪಾರ ಮಾಡಲು ಸರಕಾರ ಅವಕಾಶ ಕಲ್ಪಿಸಿರುವದನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಹಾಗೂ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ತಾ. 30 ರಂದು (ಇಂದು) ಕರೆ ನೀಡಿರುವ “ಅಖಿಲ ಭಾರತ ಔಷಧ ವ್ಯಾಪಾರ ಬಂದ್” ಹೋರಾಟಕ್ಕೆ ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಬೆಂಬಲ ಸೂಚಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಎ.ಕೆ. ಜೀವನ್ ಇಂದು ಜಿಲ್ಲೆಯ ಎಲ್ಲಾ ಔಷಧ ವ್ಯಾಪಾರಸ್ಥರು ವ್ಯಾಪಾರವನ್ನು ಸ್ಥಗಿತಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ರೋಗಿಗಳಿಗೆ ಅನಾನುಕೂಲ ವಾಗುವದರಿಂದ ತುರ್ತು ಸಂದರ್ಭಗಳಲ್ಲ್ಲಿ ಔಷಧ ನೀಡುವದಕ್ಕಾಗಿ ಎಲ್ಲಾ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂ ಗಳಲ್ಲಿ ಔಷಧ ವ್ಯಾಪಾರ ಮಾಡಲು ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೇಡಿಕೆಗಳು : ಆನ್ಲೈನ್ ಮೂಲಕ ಔಷಧ ವ್ಯಾಪಾರಕ್ಕೆ ಅವಕಾಶ ನೀಡಬಾರದು, ಆನ್ಲೈನ್ಗಳಲ್ಲಿ ಯಾವದೇ ಅಡೆತಡೆಗಳಿಲ್ಲದೆ ಮಾರಾಟವಾಗುವ ಮಾದಕ ಹಾಗೂ ಪ್ರತಿಬಂಧಕ ವಸ್ತುಗಳಿಂದಾಗಿ ಯುವ ಪೀಳಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದನ್ನು ತಡೆಗಟ್ಟಬೇಕು, ಕಳಪೆ ಗುಣಮಟ್ಟದ ಔಷಧ ಹಾಗೂ ಔಷಧದ ಬಳಕೆಯ ವಿಧಿ ವಿಧಾನದ ಮಾಹಿತಿಯ ಕೊರತೆಯಿಂದ ರೋಗಿಯ ಮೇಲೆ ಉಂಟಾಗುವ ಮಾರಕ ಪರಿಣಾಮಗಳನ್ನು ತಡೆಗಟ್ಟಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಜೀವರಕ್ಷಕ ಔಷಧಿಗಳ ಕೊರತೆಯನ್ನು ನೀಗಿಸಬೇಕು, ಸುಮಾರು 8.5 ಲಕ್ಷಕ್ಕೂ ಅಧಿಕ ಔಷಧ ವ್ಯಾಪಾರಸ್ಥರು ಮತ್ತು ಇದೇ ಉದ್ಯಮವನ್ನು ನಂಬಿ ಬದುಕುತ್ತಿರುವ 50 ಲಕ್ಷಕ್ಕೂ ಹೆಚ್ಚಿನ ನೌಕರರು ಹಾಗೂ ಅವರ ಕುಟುಂಬ ವರ್ಗದ ಉಳಿವಿಗೆ ಸರಕಾರ ಕ್ರಮ ಕೈಗೊಳ್ಳಬೇಕು, ಫಾರ್ಮಸಿಸ್ಟ್ ಹಾಗೂ ಔಷಧ ಪರವಾನಗಿ ನವೀಕರಣದಲ್ಲಿ ಇರುವ ಗೊಂದಲವನ್ನು ನಿವಾರಿಸಬೇಕೆಂದು ಸಂಘ ಸರಕಾರವನ್ನು ಒತ್ತಾಯಿಸಿದೆ ಎಂದು ತಿಳಿಸಿದ್ದಾರೆ.