ಕೂಡಿಗೆ, ಮೇ 29: ರಾಜ್ಯ ಮತ್ತು ಜಿಲ್ಲಾ ಐಎನ್‍ಟಿಯುಸಿ ವತಿಯಿಂದ ರಾಜ್ಯ ಸರ್ಕಾರದ ನಾಲ್ಕು ವರ್ಷದ ಸಾಧನೆಯನ್ನು ಜಿಲ್ಲೆಯ ಎಲ್ಲರ ಮನೆಗೆ ತಲಪಿಸುವ ಗುರಿಯೊಂದಿಗೆ ಚಾಲನೆಗೊಂಡ ಬೈಕ್ ಕುಶಾಲನಗರ ಹೋಬಳಿ ವ್ಯಾಪ್ತಿಯ ಗುಡ್ಡೆಹೊಸೂರು ಮಾರ್ಗವಾಗಿ ಕುಶಾಲನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಾದ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಕೂಡುಮಂಗಳೂರು, ಕೂಡಿಗೆ ಮಾರ್ಗವಾಗಿ ಹೆಬ್ಬಾಲೆ, ತೊರೆನೂರು ಗ್ರಾಮಗಳಲ್ಲಿ ಸಂಚರಿಸಿತು. ಸುಮಾರು 500ಕ್ಕೂ ಅಧಿಕ ಬೈಕ್ ಸವಾರರು ರಾಜ್ಯ ಸರ್ಕಾರದ ಸಾಧನೆಯ ಬಗ್ಗೆ ಘೋಷಣೆ ಕೂಗುತ್ತಾ, ಕರಪತ್ರಗಳನ್ನು ಹಂಚುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಶಿರಂಗಾಲದಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಜನಪರ ಯೋಜನೆಗಳಾದ ಕ್ಷೀರಭಾಗ್ಯ, ಸೌರಭಾಗ್ಯ, ಪಶುಭಾಗ್ಯ, ವಿದ್ಯಾಸಿರಿ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಗೆ ಸಹಕಾರಿಯಾಗಲು ಐಎನ್‍ಟಿಯೂಸಿ ವತಿಯಿಂದ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮಾಂತರ ಪ್ರದೇಶದ ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಐಎನ್‍ಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎನ್ ಮುದ್ದಪ್ಪ, ಕೊಡಗು ಜಿಲ್ಲಾ ಐಎನ್‍ಟಿಯುಸಿ ಅಧ್ಯಕ್ಷ ಟಿ.ಪಿ.ಹಮೀದ್, ಕಾರ್ಯದರ್ಶಿ ಗೋವಿಂದ್‍ರಾಜ್‍ದಾಸ್, ಧರ್ಮಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ, ಹೋಬಳಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು, ಸಮಿತಿಯ ಕಾರ್ಯಕರ್ತರು ಇದ್ದರು.