*ಗೋಣಿಕೊಪ್ಪಲು, ಮೇ 29: ಧ್ವನಿಯೆತ್ತಿದವರನ್ನು ದಮನ ಮಾಡುವ ಕಾರ್ಯ ಕಾಂಗ್ರೆಸ್ ಪಕ್ಷದಲ್ಲಿ ನೆಹರೂ ಕಾಲದಿಂದಲೇ ಚಲಾವಣೆಯಲ್ಲಿದೆ. ನಿಷ್ಠಾವಂತ ಅಧಿಕಾರಿಗಳನ್ನು ಹತ್ಯೆ ಮಾಡುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಮುಂದಾಗಿದೆ ಎಂದು ರಾಜ್ಯ ಬಿ.ಜೆ.ಪಿ. ಕಾರ್ಯದರ್ಶಿ ಮನು ಮುತ್ತಪ್ಪ ಆರೋಪಿಸಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆದ ತಾಲೂಕು ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ರಾಜ್ಯದ ಆಡಳಿತಕ್ಕೆ ಬಿ.ಜೆ.ಪಿ.ಗೆ ಸುಗಮ ಹಾದಿ ಮಾಡಿಕೊಡಲು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಶ್ರಮಿಸಬೇಕಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಕೀಳುಮಟ್ಟದ ಪ್ರಚಾರಕ್ಕೆ ಜೀವಕೊಡದೆ ಪಕ್ಷ ಸಂಘಟನೆಗೆ ಮುಂದಾಗಬೇಕು. ಹಿರಿಯ ನಾಯಕರು ಸೂಚಿಸಿದ ಅಭ್ಯರ್ಥಿಯ ಗೆಲುವಿಗಾಗಿ ಸ್ಪಂದಿಸಬೇಕು ಎಂದು ಕರೆ ನೀಡಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪಕ್ಷದ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಬಿ.ಜೆ.ಪಿ ಕಾರ್ಯಕರ್ತರು ಧ್ವನಿಎತ್ತಿ ಪ್ರಶ್ನಿಸಬೇಕಾಗಿದೆ. ಬಿ.ಜೆ.ಪಿ ಸರಕಾರದ ಅಭಿವೃದ್ದಿ ಕಾರ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯ ಸರಕಾರ ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಅರಣ್ಯ ಮಂಡಳಿಯ ಉಪಾಧ್ಯಕ್ಷರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಬಿ.ಜೆ.ಪಿ ಕಾರ್ಯಕರ್ತರು ಪ್ರಶ್ನಿಸಬೇಕು. ಕೇಂದ್ರದ ಯೋಜನೆಗಳನ್ನು ಜನಸಾಮಾನ್ಯರಿಗೆÀ ಮನಮುಟ್ಟಿಸುವಂತೆ ಪ್ರಚಾರಕಾರ್ಯ ಕಾರ್ಯಕರ್ತರಿಂದ ನಡೆಯಬೇಕಾಗಿದೆ. ಕಾಂಗ್ರೆಸ್ ಸರಕಾರದ ಭ್ರಷ್ಟತೆಗೆ ನಂಬರ್ 1 ಪಟ್ಟ ದೊರೆತಿದೆ. ಈ ಕಳಂಕವನ್ನು ಹೋಗಲಾಡಿಲು ಬಿ.ಜೆ.ಪಿ ಮುಂದಿನ ಚುನಾವಣೆಯಲ್ಲಿ ಆಡಳಿತಕ್ಕೆ ಬರಬೇಕು ಎಂದು ಹೇಳಿದರು.

ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಭಾರತೀಶ್ ಮಾತನಾಡಿ, ಸಾಮಾಜಿಕ ತಾಣಗಳನ್ನು ಉತ್ತಮ ಪ್ರಚಾರಕ್ಕೆ ಬಳಸಿಕೊಳ್ಳಬೇಕು. ಬಿ.ಜೆ.ಪಿ. ಸರಕಾರದ ಆಡಳಿತಕ್ಕೆ ಅನುವು ಮಾಡಿಕೊಡಲು ಕಾರ್ಯಕರ್ತರು ಪ್ರಮಾಣ ಮಾಡಬೇಕಾಗಿದೆ. ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಮಿತಿಮೀರಿದೆ. ಜಾತಿ ರಾಜಕೀಯದಿಂದ ಹೊಡೆದು ಆಳುವ ಮನೋಭಾವ ಕಾಂಗ್ರೆಸ್ ಸರಕಾರದ್ದು, ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಜಯ ಸಾಧಿಸಬೇಕು ಎಂದು ಹೇಳಿದರು.