ಸೋಮವಾರಪೇಟೆ, ಮೇ 28 : ಕುರುಹಿನ ಶೆಟ್ಟಿ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಮುದಾಯ ಬಾಂಧವರು ಶ್ರಮಿಸಬೇಕು ಎಂದು ಸೋಮವಾರಪೇಟೆ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ರಾಮ್‍ಶೆಟ್ಟಿ ಹೇಳಿದರು.ಇಲ್ಲಿನ ರಾಮಮಂದಿರದಲ್ಲಿ ಆಯೋಜಿಸಲಾಗಿದ್ದ ಸಮಾಜದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಏಳಿಗೆಗೆ ಸರ್ವರೂ ಸಹಕಾರ ನೀಡಬೇಕು. ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬಂದರೆ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
2016-17ನೇ ಸಾಲಿನಲ್ಲಿ 5ನೇ ತರಗತಿ ಮೇಲ್ಪಟ್ಟು ಉತ್ತೀರ್ಣರಾದ ಜನಾಂಗದ ಬಡ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಸಹಾಯಧನ ಪಡೆಯಲು ಇಚ್ಛಿಸುವವರು ಜೂ.20ರ ಒಳಗೆ ಸಮಾಜದ ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸಬೇಕು ಎಂದರು.
2016-17ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ, ಅಂತಿಮ ಪದವಿ, ಸ್ನಾತಕೋತ್ತರ ಪದವಿ ಹಾಗೂ ವೃತ್ತಿಶಿಕ್ಷಣ ಕೋರ್ಸ್‍ನಲ್ಲಿ ಹೆಚ್ಚಿನ ಅಂಕಗಳಿಸಿದ
(ಮೊದಲ ಪುಟದಿಂದ) ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ದೃಢೀಕರಿಸಿದ ಅಂಕಪಟ್ಟಿಯೊಂದಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದವರು ಹಾಗೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಜೂ.25ರಂದು ಸಂಜೆ 4ಗಂಟೆಗೆ ರಾಮಮಂದಿರದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಬೇಕು ಎಂದು ರಾಮಶೆಟ್ಟಿ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ವಾರ್ಷಿಕ ವರದಿ ಮಂಡನೆ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಇತರ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಕ್ರೀಡಾಕ್ಷೇತ್ರದಲ್ಲಿನ ಸಾಧನೆಗಾಗಿ ನಗರದ ಮೋಹನ್ ಮತ್ತು ಶೋಭಾ ದಂಪತಿ ಪುತ್ರ, ಪೊನ್ನಂಪೇಟೆ ಕ್ರೀಡಾಶಾಲೆಯ ವಿದ್ಯಾರ್ಥಿ ಸೂರ್ಯ ಮತ್ತು ಮಲ್ಲಣ್ಣ ಅವರ ಪುತ್ರ ಲಿಖಿತ್ ಅವರುಗಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸಂಘದ ಉಪಾಧ್ಯಕ್ಷ ಬಿ.ಬಿ.ಮೋಹನ್, ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ಪದಾಧಿಕಾರಿಗಳಾದ ಕೆ.ಎನ್.ಮಂಜುನಾಥ್, ಬಿ.ಸಿ.ರೇವಣ್ಣ, ಎನ್.ಎನ್. ರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.