ಕೂಡಿಗೆ, ಮೇ 29: ಕೊಡಗು ಮತ್ತು ಹಾಸನ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ನಿಯಮಿತ ಆಶ್ರಯದಲ್ಲಿ ಕೂಡಿಗೆಯ ಕೃಷಿ ಕ್ಷೇತ್ರದ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಹಾಸನದ ವೈ.ಸಿ.ರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಘದ ಮಹಾಸಭೆ ನಡೆಯಿತು. ಮುಂದಿನ ದಿನಗಳಲ್ಲಿ ರೈತರು ಉತ್ಪಾದಿಸಿದ ಸಾವಯವ ಕೃಷಿಯ ವಸ್ತುಗಳನ್ನು ಕೊಡಗು ಜಿಲ್ಲೆಯಲ್ಲಿ ಮಾರಾಟ ಮಾಡಲು ಕುಶಾಲನಗರದ ರೈತ ಸಂಪರ್ಕ ಕೇಂದ್ರದ ಸಮೀಪದಲ್ಲಿ ಸಾವಯವ ಮಳಿಗೆಯನ್ನು ಜುಲೈ ಮೊದಲ ವಾರದಲ್ಲಿ ತೆರೆಯಲಾಗುವದು ಎಂದು ಒಕ್ಕೂಟದ ಅಧ್ಯಕ್ಷ ವೈ.ಸಿ.ರುದ್ರಪ್ಪ ತಿಳಿಸಿದರು.

ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಪ್ರಸಾದ್ ಮಾತನಾಡಿ, ಸಾವಯವ ಕೃಷಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸಾವಯವ ರೈತರಿಗೆ ಮಾರುಕಟ್ಟೆ ಒದಗಿಸುವದು ಮುಖ್ಯವಾಗಿರುತ್ತದೆ. ಈಗಾಗಲೇ ರೈತರು ತಮ್ಮ ಜಮೀನುಗಳಲ್ಲಿ ಸಾವಯವ ಗೊಬ್ಬರವನ್ನು ಉಪಯೋಗಿಸಿ ಜಿಲ್ಲೆಯಲ್ಲಿ ಹೆಚ್ಚು ಸಾವಯವ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಾವಯವ ಬೆಳೆಗಳು ಗ್ರಾಹಕರಿಗೆ ತಲಪುವಂತೆ ಗ್ರಾಹಕರು ಸಾವಯವ ಗೊಬ್ಬರದಿಂದ ಬೆಳೆದ ಆಹಾರದ ಪದಾರ್ಥಗಳನ್ನು ಪಡೆಯಲು ಹಾಗೂ ಸಿರಿಧಾನ್ಯ ಉತ್ಪನ್ನಗಳನ್ನು ಮಾರಾಟ ಮಾಡುವದು ಇದರ ಉದ್ದೇಶವಾಗಿದೆ.

ಜಿಲ್ಲೆಯಲ್ಲಿ ಉತ್ಪಾದಿಸಿದ ಕಿತ್ತಳೆ, ಸುವರ್ಣಗೆಡ್ಡೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸುವದರ ಜೊತೆಗೆ ಮಾರಾಟ ಮಾಡುವದರ ಮೂಲಕ ಜಿಲ್ಲೆಯ ಗ್ರಾಹಕರಿಗೆ ಉತ್ತಮವಾದ ವಸ್ತುಗಳನ್ನು ತಲಪಿಸುವದು ಮುಖ್ಯ ಉದ್ದೇಶ ಎಂದರು.

ಸಭೆಯಲ್ಲಿ ತಾಲೂಕು ಕೃಷಿ ನಿರ್ದೇಶಕ ಹೆಚ್.ಎಸ್.ರಾಜಶೇಖರ್, ಒಕ್ಕೂಟದ ಉಪಾಧ್ಯಕ್ಷ ಮುತ್ತಪ್ಪ, ನಿರ್ದೇಶಕರುಗಳಾದ ಧರ್ಮಪ್ಪ, ಕೃಷ್ಣಮೂರ್ತಿ, ಮಾಗೋಡ್ ಬಸವರಾಜ್, ಧರ್ಮಲಿಂಗಂ, ಸದಾಜಗಪ್ಪ, ಜಿಲ್ಲಾ ಕಾರ್ಯಸಂಯೋಜಕ ಪುಟ್ಟಸ್ವಾಮಿ, ಕ್ಷೇತ್ರಾಧಿಕಾರಿ ಲೋಕೇಶ್ ಸೇರಿದಂತೆ ಸಂಘದ ನಿರ್ದೇಶಕರು ಇದ್ದರು.