ಮಡಿಕೇರಿ ಮೇ 29 : ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಮಾರ್ಗಗಳಿಂದ ಕಾವೇರಿ ನಾಡು ಕೊಡಗು ಜಿಲ್ಲೆಗೆ ಧಕ್ಕೆಯಾಗುವದನ್ನು ತಡೆಯುವದಕ್ಕಾಗಿ ಜನಜಾಗೃತಿ ಮೂಡಿಸಲು ಜೂ.2 ರಂದು ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿಭಟನಾ ರ್ಯಾಲಿ ನಡೆಸುವದಾಗಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಪ್ರಮುಖ ಕರ್ನಲ್ ಸಿ.ಪಿ.ಮುತ್ತಣ್ಣ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಾವೇರಿ ನದಿಗೆ ಸಂಚಕಾರವಾಗುವಂತಹ ಯೋಜನೆಗಳು ಜಾರಿಗೆ ಬರುತ್ತಿದ್ದು, ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳದಿದ್ದಲ್ಲಿ ಮುಂದೊಂದು ದಿನ ಅಪಾಯ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಕೇರಳಕ್ಕೆ ಹಾದುಹೋಗಿರುವ ಹೈಟೆನ್ಶನ್ ವಿದ್ಯುತ್ ಮಾರ್ಗದಿಂದಾಗಿ ಜಿಲ್ಲೆಯ ಸುಮಾರು 54 ಸಾವಿರ ಬೆಲೆಬಾಳುವ ಮರಗಳು ನಾಶವಾಗಿವೆ. ಇದೀಗ ಮೈಸೂರು, ಮಕ್ಕಂದೂರು ರೈಲ್ವೇ ಮಾರ್ಗಕ್ಕಾಗಿ ಯೋಜನೆ ರೂಪಿಸಿರುವ ಬಗ್ಗೆ ತಿಳಿದು ಬಂದಿದ್ದು, ಇದಕ್ಕಾಗಿ 1587 ಕೋಟಿ ರೂ. ಗಳನ್ನು ಖರ್ಚು ಮಾಡಲಾಗುತ್ತಿದೆ. ಕೇರಳದ ತಲಚೇರಿಯಿಂದ ದಕ್ಷಿಣ ಕೊಡಗಿನ ಮೂಲಕ ಮೈಸೂರು ತಲಪುವ ರೈಲ್ವೇ ಮಾರ್ಗ ನಿರ್ಮಾಣದ ಯೋಜನೆ ಕೂಡ ಇದ್ದು, 4 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿರುವ ಬಗ್ಗೆ ಮಾಹಿತಿ ಹಕ್ಕಿನಿಂದ ತಿಳಿದು ಬಂದಿದೆ. ರೈಲ್ವೆ ಮಾರ್ಗಕ್ಕಾಗಿ ಕೇರಳದಲ್ಲಿ

(ಮೊದಲ ಪುಟದಿಂದ) ಒತ್ತಡ ಹೆಚ್ಚಾಗುತ್ತಿದ್ದರೆ, ಕೊಡಗಿನ ಜನ ನಿದ್ರೆಯಲ್ಲಿದ್ದಾರೆ ಎಂದು ಕರ್ನಲ್ ಮುತ್ತಣ್ಣ ಟೀಕಿಸಿದರು.

ಮೈಸೂರು, ಕೊಡಗು ಮೂಲಕ ಕೇರಳಕ್ಕೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಕೇರಳಕ್ಕೆ ಸೌಲಭ್ಯಗಳನ್ನು ಕಲ್ಪಿಸುವದಕ್ಕಾಗಿ ಕೊಡಗನ್ನು ನಾಶ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅನಧಿಕೃತ ಲೇಔಟ್‍ಗಳು ತಲೆ ಎತ್ತುತ್ತಿದ್ದು, ಕೊಡಗು ಒಂದು ಸ್ಲಂ ಆಗಿ ಮಾರ್ಪಟ್ಟಿದೆ ಎಂದು ಮುತ್ತಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಭ್ರಷ್ಟಾಚಾರದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ ಕೊಡಗು ಮೊದಲ ಸ್ಥಾನದಲ್ಲಿರುವದು ದುರಂತವೆಂದು ಬೇಸರ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಗೆ ಮತ್ತು ಕಾವೇರಿ ನದಿಗೆ ಮಾರಕವಾಗಬಲ್ಲ ಯೋಜನೆಗಳನ್ನು ವಿರೋಧಿಸಿ, ಅನಧಿಕೃತ ಭೂಪರಿವರ್ತನೆ ಮತ್ತು ಕಟ್ಟಡ ನಿರ್ಮಾಣದ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನಾ ರ್ಯಾಲಿ ನಡೆಸುತ್ತಿರುವದಾಗಿ ತಿಳಿಸಿದರು.

ಜೂ.2ರಂದು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಗಾಂಧಿ ಮೈದಾನದಲ್ಲಿ ಸಭೆ ನಡೆಸಲಾಗುವದು. ಸಭೆಯನ್ನು ಉದ್ದೇಶಿಸಿ ಪ್ರಮುಖರು ಮಾತನಾಡಲಿದ್ದು, ಕೊಡಗು ಮತ್ತು ಕಾವೇರಿ ನದಿಯ ಸಂರಕ್ಷಣೆಗಾಗಿ ನಿರ್ಣಯ ಕೈಗೊಳ್ಳಲಾಗುವದು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದೆಂದು ಕರ್ನಲ್ ಮುತ್ತಣ್ಣ ತಿಳಿಸಿದರು.

ಪ್ರತಿಭಟನಾ ರ್ಯಾಲಿಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಸೇವ್ ರಿವರ್ ಕಾವೇರಿ ಫೋರಂ, ಬಸವಣ್ಣ ದೇವರ ಬನ ಟ್ರಸ್ಟ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ, ಕೊಡವ ಮಕ್ಕಡ ಕೂಟ, ಸತ್ಯಾನ್ವೇಷಣಾ ಸಮಿತಿ, ಕಾವೇರಿ ಸೇನೆ, ಮಡಿಕೇರಿ ಕೊಡವ ಸಮಾಜ, ಪೊನ್ನಂಪೇಟೆ ಕೊಡವ ಸಮಾಜ, ಅಮ್ಮತ್ತಿ ರೈತ ಸಂಘ, ಯುನೈಟೆಡ್ ಕೊಡವ ಆರ್ಗನೈಜೇಷನ್, ಕನ್ನಿಕಾವೇರಿ ಸೇವಾ ಟ್ರಸ್ಟ್, ಹೇಮಾವತಿ ಸೇನೆ, ಕ್ಲೀನ್ ಕೂರ್ಗ್, ಕೂರ್ಗ್ ಎಡ್ವೆಂಚರ್ ಕ್ಲಬ್, ಕೂರ್ಗ್ ಎಡ್ವೆಂಚರ್ ಟೂರಿಸಂ ಅಂಡ್ ಸರ್ವಿಸಸ್, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಲಿವೆ.

ಕೊಡಗನ್ನು ಉಳಿಸುವದಕ್ಕಾಗಿ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮುತ್ತಣ್ಣ ಮನವಿ ಮಾಡಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಕೊಡಗು ಅವನತಿಯತ್ತ ಸಾಗುತ್ತಿದ್ದು, ಕಾವೇರಿ ನದಿ ಮಲಿನಗೊಳ್ಳುತ್ತಿರುವದು ವಿಷಾದಕರವೆಂದರು. ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಕಾವೇರಿ ನದಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕರೆ ನೀಡಲಾಗುವದು ಎಂದರು.

ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮುಕ್ಕಾಟಿರ ಚೋಟು ಅಪ್ಪಯ್ಯ ಮಾತನಾಡಿ, ರೈಲು ಮಾರ್ಗ ಬಂದರೆ ಕೊಡಗು ಜಿಲ್ಲೆ “ಬರ್ತ್ ಡೇ ಕೇಕ್”ನಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಗೆ ಬರುವ ಅಧಿಕಾರಿಗಳಿಂದಲೇ ಹೆಚ್ಚು ಮರಗಳು ನಾಶವಾಗುತ್ತಿವೆ ಎಂದು ಆರೋಪಿಸಿದ ಅವರು, ಕಾವೇರಿ ನೀರು ರಾಜ್ಯಕ್ಕೆ ಬೇಕಾದರೆ ಕೊಡಗಿನಲ್ಲಿ ಮೊದಲು ಅರಣ್ಯವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕ್ರಮಕೈಗೊಳ್ಳಲಿ ಎಂದರು.

ಪ್ರವಾಸಿಗರ ಆಗಮನದಿಂದಾಗಿ ಅರಣ್ಯ ಪ್ರದೇಶಗಳು ಕೂಡ ಕಲುಷಿತಗೊಳ್ಳುತ್ತಿದ್ದು, ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ರಾರಾಜಿಸುತ್ತಿವೆ. ಕೊಡಗು ಒಂದು ಡಂಪಿಂಗ್ ಯಾರ್ಡ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಪ್ರಮುಖ ನಿವೃತ್ತ ಮೇಜರ್ ಬಿ.ಎ.ನಂಜಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವದರಿಂದ ಯಾವದೇ ಪ್ರಯೋಜನವಿಲ್ಲವೆಂದು ಅಭಿಪ್ರಾಯಪಟ್ಟರು. ಜಿಲ್ಲೆಗೆ ಬರುವ ಹಾದಿ ತಪ್ಪಿದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಹೆಂಡ, ಹೆಣ್ಣನ್ನು ಹುಡುಕುವವರು ಹೆಚ್ಚಾಗಿದ್ದಾರೆ ಎಂದು ಆರೋಪಿಸಿದರು.

ದಕ್ಷಿಣ ಕೊಡಗಿನಲ್ಲಿ ರಸ್ತೆ ಅಗಲೀಕರಣ ಮಾಡುವದಾಗಿ ಘೋಷಣೆ ಮಾಡಿ ಸುಮಾರು 1200 ಹಲಸಿನ ಮರಗಳನ್ನು ನಾಶಮಾಡಲಾಗಿದೆ. ಆದರೆ ಇಂದಿಗೂ ರಸ್ತೆ ಅಗಲೀಕರಣಗೊಂಡಿಲ್ಲವೆಂದು ಟೀಕಿಸಿದರು.

2012-13ರಲ್ಲಿ ರಾಜಕಾರಣಿಗಳು ಹೈಟೆನ್ಷನ್ ವಿದ್ಯುತ್ ಮಾರ್ಗಕ್ಕಾಗಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ಭ್ರಷ್ಟ ವ್ಯವಸ್ಥೆಯ ವಿರುದ್ಧ ಜನಜಾಗೃತರಾಗಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಯುಕೋ ಸಂಘಟನೆಯ ಪ್ರಮುಖ ಅನೀಶ್ ಮಾದಪ್ಪ ಉಪಸ್ಥಿತರಿದ್ದರು.