ಸಿದ್ದಾಪುರ, ಮೇ 29: ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಆಶ್ರಯದಲ್ಲಿ ತಮಿಳು ಯುವವೇದಿಕೆಯಿಂದ ಜನಾಂಗದವರಿಗೆ ಸಿದ್ದಾಪುರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಮೊದಲ ವರ್ಷದ ಕಾವೇರಿ ಕ್ರಿಕೆಟ್ ಕಪ್‍ನಲ್ಲಿ ಕೌಟಿಲ್ಯ ಬ್ರಿಗೇಡಿಯರ್ ಪೊನ್ನಂಪೇಟೆ ತಂಡ ವಿನ್ನರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಕೌಟಿಲ್ಯ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ವಿನ್ನರ್ಸ್ ಸಿದ್ದಾಪುರ ತಂಡ ನಾಲ್ಕು ಓವರ್‍ನಲ್ಲಿ 36 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಕೌಟಿಲ್ಯ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲವು ಸಾಧಿಸಿ ಕಾವೇರಿ ಕ್ರಿಕೆಟ್ ಕಪ್ ಅನ್ನು ತನ್ನದಾಗಿಸಿಕೊಂಡಿತು.
ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸಿಕ್ಸ್ ಅಂಡ್ ಫಿಕ್ಸ್ ಹೊಸಳ್ಳಿ ತಂಡದ ವಿರುದ್ಧ ಟೀಂ ವಿನ್ನರ್ ಸಿದ್ದಾಪುರ ತಂಡ ಗೆಲುವು ಸಾಧಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಎಫ್.ಸಿ.ಸಿ. ಘಟ್ಟದಳ್ಳ ತಂಡದ ವಿರುದ್ಧ ಕೌಟಿಲ್ಯ ಬ್ರಿಗೇಡಿಯರ್ ಪೊನ್ನಂಪೇಟೆ ತಂಡ ಗೆಲುವು ಸಾಧಿಸಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯಿತು.
ಕ್ರಿಕೆಟ್ ಪಂದ್ಯದ ನಂತರ ಪುರುಷರಿಗೆ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಟೀಂ ವಿನ್ನರ್ ಸಿದ್ದಾಪುರ ಪ್ರಥಮ ಹಾಗೂ ಕುಮಾರ್ ಫ್ರೆಂಡ್ಸ್ ತಂಡ ದ್ವಿತೀಯ ಬಹುಮಾನ ಪಡೆಯಿತು.
ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಜಯ್, ದಿವ್ಯ, ಅರವಿಂದ್, ಪಾಂಡ್ಯನ್, ವಿಘ್ನೇಶ್, ಮಹೇಶ್ ಪಿಳೈ, ಪ್ರಭಾ, ಸಿ. ಸಿಂಧು, ಅವಿನಾಶ್, ಡಿ.ಎಂ. ಯತೀನ್, ಸಂಗೀತ, ವಿಘ್ನೇಶ್ ಎಂ. ಭೂತನಕಾಡು, ಪ್ರಿನ್ಸ್, ಧನಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಉಪಾಧ್ಯಕ್ಷ ಮೋಹನ್ ರಾಜ್, ಪ್ರಧಾನ ಕಾರ್ಯದರ್ಶಿ ಮೋಹನ್, ಗೋಣಿಕೊಪ್ಪ ಸಂಘದ ಅಧ್ಯಕ್ಷ ಸುಬ್ರಮಣಿ, ಸಂಪಾಜೆ ಅಮ್ಮನ್ ಸಹಕಾರ ಸಂಘದ ಕಾರ್ಯದರ್ಶಿ ಶಿವ ಪೆರುಮಾಳ್, ಕೊಡಗು ತಮಿಳು ಯುವವೇದಿಕೆಯ ಪ್ರಮುಖ ಸುರೇಶ್ ಬಿಳಿಗೇರಿ ಮತ್ತಿತರರು ಹಾಜರಿದ್ದರು.