ಕೂಡಿಗೆ, ಮೇ 28: ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಮ್ಮನಕೊಲ್ಲಿ ಮತ್ತು ಮುಳ್ಳುಸೋಗೆ ಗ್ರಾಮಗಳ ಜಂಟಿ ಆಶ್ರಯದಲ್ಲಿ ಮುಳ್ಳುಸೋಗೆ ಗ್ರಾಮದಲ್ಲಿರುವ ಶ್ರೀ ದೊಡ್ಡಮ್ಮ ತಾಯಿ ದೇವಾಲಯದ ವಾರ್ಷಿಕ ಪೂಜೋತ್ಸವ ಮತ್ತು ಬಂಡಿ ಹಬ್ಬವು ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಆವರಣದಲ್ಲಿ ಹೋಮ ಹವನಗಳು, ವಿಶೇಷ ಪೂಜೆ, ಅಭಿಷೇಕಗಳು ನಡೆದವು. ಅಗ್ನಿ ಕೊಂಡಕ್ಕೆ ಗ್ರಾಮದ ಪ್ರಮುಖರು ಬೆಂಕಿ ಹಂಚಿಸುವ ಮೂಲಕ ಚಾಲನೆ ನೀಡಿದರು. ಮುಳ್ಳುಸೋಗೆ ಮತ್ತು ಗುಮ್ಮನಕೊಲ್ಲಿ ಗ್ರಾಮಗಳ ಮಧ್ಯೆ ಇರುವ ದೊಡ್ಡಮ್ಮ ತಾಯಿಯ ದೇವಸ್ಥಾನವು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿತ್ತು. ಈ 2 ಗ್ರಾಮಗಳಲ್ಲಿ ತಳಿರು ತೋರಣ ಹಾಗೂ ಕೇಸರಿ ಬಣ್ಣದ ಬಂಟಿಗ್ಸ್ ಕಟ್ಟುವದರ ಮೂಲಕ ಗ್ರಾಮವೆ ಕೇಸರಿಮಯವಾಗಿ ವಿದ್ಯುತ್ ದೀಪಗಳಿಂದ ರಾರಾಜಿಸುತ್ತಿತ್ತು.

ಹರಕೆ ಹೊತ್ತ ಎರಡು ಗ್ರಾಮಗಳ ಭಕ್ತಾದಿಗಳು ಮಧ್ಯರಾತ್ರಿಯಲ್ಲಿ ದೇವಾಲಯದ ಬನದಲ್ಲಿ ಬೆಂಕಿ ಕೊಂಡವನ್ನು ಹಾಯುವ ಮೂಲಕ ಹರಕೆ ತೀರಿಸಿ ಭಕ್ತಿ ಮೆರೆದರು.

ವಿದ್ಯುತ್ ದೀಪ ಅಲಂಕೃತಗೊಂಡು ರಥದಲ್ಲಿ ದೇವಿಯ ವಿಗ್ರಹವನ್ನು ಕುಳ್ಳಿರಿಸಿದ ನಂತರ ರಥೋತ್ಸವ ಮಧ್ಯ ರಾತ್ರಿಯಲ್ಲಿ ಚಾಲನೆಗೊಂಡು ದೇವಾಲಯದ ಬನದವರೆಗೆ ಗ್ರಾಮಸ್ಥರು ಮಂಗಳವಾದ್ಯ ಮತ್ತು ನಾಡವಾದ್ಯಗಳೊಂದಿಗೆ ಮೆರವಣಿಗೆ ಸಾಗಲಾಯಿತು.

ಪೂಜೋತ್ಸವದಲ್ಲಿ ಜಿಲ್ಲೆಯ ಜನರು ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.