ಮಡಿಕೇರಿ, ಮೇ 29: ವಾರದ ಹಿಂದೆಯಷ್ಟೇ ರಚನೆಗೊಂಡಿರುವ ತಲಕಾವೇರಿ - ಭಾಗಮಂಡಲ ಬ್ರಹ್ಮ ಕಲಶೋತ್ಸವ ಸಮಿತಿಯನ್ನು ತಡೆಹಿಡಿಯಲಾಗಿದೆ. ಸಮಿತಿಯಲ್ಲಿ ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದವರನ್ನು ಕಡೆಗಣಿಸ ಲಾಗಿದೆ. ಒಂದೇ ವರ್ಗದವರಿಗೆ ಅವಕಾಶ ನೀಡಲಾಗಿದೆ ಎಂಬ ಆಕ್ಷೇಪ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಸಮಿತಿಯನ್ನು ತಡೆ ಹಿಡಿದಿರುವದಾಗಿ ತಿಳಿದು ಬಂದಿದೆ.

ದೇವತಾ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ಬಳಿಕ 12 ವರ್ಷಗಳ ನಂತರ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಬೇಕಿದ್ದು, ಅದರಂತೆ ತಲಕಾವೇರಿ - ಭಾಗಮಂಡಲ ಕ್ಷೇತ್ರದ ಜೀರ್ಣೋದ್ಧಾರಗೊಂಡು 12 ವರ್ಷ ಪೂರೈಸಿರುವದರಿಂದ ಬ್ರಹ್ಮ ಕಲಶೋತ್ಸವ ನಡೆಸುವ ಸಂಬಂಧ ಸಮಿತಿಯೊಂದನ್ನು ರಚಿಸಲಾಗಿತ್ತು. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಸೂಚನೆ ಪ್ರಕಾರ ಕೊಡವ - ಅಮ್ಮಕೊಡವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಬಿ. ದೇವಯ್ಯ ಸೇರಿದಂತೆ ಒಟ್ಟು 19 ಮಂದಿಯನ್ನೊಳಗೊಂಡ ನೂತನ ಸಮಿತಿ ಕಳೆದ ತಾ. 21 ರಂದು ಜಿಲ್ಲಾಧಿಕಾರಿಗಳ ಅನುಮೋದನೆ ಯೊಂದಿಗೆ ರಚನೆಯಾಗಿತ್ತು. ಸಮಿತಿ ರಚನೆಗೊಂಡ ದಿನದಿಂದಲೇ ಸಮಿತಿ ಬಗ್ಗೆ ಆಕ್ಷೇಪಗಳು ವ್ಯಕ್ತಗೊಂಡಿತ್ತು. ಇದೀಗ ಈ ಬಗ್ಗೆ ಸರಕಾರಕ್ಕೂ ಆಕ್ಷೇಪಣೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಉಸ್ತುವಾಗಿ ಸಚಿವರಾದ ಎಂ.ಆರ್. ಸೀತಾರಾಂ ಅವರು ಸಮಿತಿಯನ್ನು ತಡೆಹಿಡಿಯುವಂತೆ ಆದೇಶಿಸಿದ್ದಾರೆ. ಮುಂದಕ್ಕೆ ಬದಲಾವಣೆಯೊಂದಿಗೆ ಶಿಫಾ ರಸ್ಸಾಗುವ ವ್ಯಕ್ತಿಗಳ ಹೆಸರುಗಳನ್ನು ಸೇರ್ಪಡೆಗೊಳಿಸಿ, ಧಾರ್ಮಿಕ ದತ್ತಿ ಇಲಾಖೆಯ ಅನುಮೋದನೆಯ ಬಳಿಕ ನೂತನ ಸಮಿತಿ ರಚನೆಯಾಗಲಿದೆ. ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ‘ಶಕ್ತಿ’ಯೊಂದಿಗೆ ಹೇಳಿದರು. ಮೂಲಗಳ ಪ್ರಕಾರ ಸಮಿತಿಯಲ್ಲಿ ಮಾರ್ಪಾಡು ಗಳಾಗಲಿದ್ದು, 19 ಮಂದಿ ಇರುವ ಸಮಿತಿ 30ಕ್ಕೇರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.