ಮಡಿಕೇರಿ, ಮೇ 28: ಮೈಸೂರಿನಲ್ಲಿ ತಾ. 4 ರಂದು ಟಿಪ್ಪು ನಿರ್ವಾಣ ಆಚರಿಸಲಾಗಿದ್ದು, ಇದು ಈ ಅಂತರ್ರಾಷ್ಟ್ರೀಯ ಭಯೋತ್ಪಾದಕರು ಕೊಡಗನ್ನು ಘಜ್ವಾ-ಎ-ಹಿಂದ್ ಗ್ರೀನ್ ಕಾರಿಡಾರ್ ಮಾಡಲು ಹೊರಟ ಸಂಚಾಗಿದೆ. ಇದು ಮುಂದೆ ಕೊಡಗಿಗೆ ಭಾರೀ ಗಂಡಾಂತರಕಾರಿ ಸೂಚನೆಯಾಗಿದೆ. ಈ ಕುರಿತು ಗುಪ್ತಚರ ದಳಗಳಾದ ಎನ್.ಐ.ಎ., ರಾ ಮತ್ತು ಗೃಹ ಇಲಾಖೆ ಕಣ್ಗಾವಲಿರಿಸಬೇಕು ಎಂದು ಆಗ್ರಹಿಸಿ ಸಿ.ಎನ್.ಸಿ. ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕರ್ನಾಟಕ ರಾಜ್ಯಪಾಲ ವಾಜು ಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಲಾಗಿದೆ.

ಜಿಲ್ಲೆಯಲ್ಲಿ ಐ.ಎಸ್.ಐ. ಮತ್ತು ಐ.ಎಸ್.ಐ.ಎಸ್. ವಿದ್ರೋಹಿಗಳಿಂದ ಮುಂದೆ ಭಾರೀ ಪ್ರಮಾಣದ ಬುಡಮೇಲು ಕೃತ್ಯ ನಡೆಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿರುವ ಸಿ.ಎನ್.ಸಿ. ಕೊಡಗನ್ನು ನುಂಗಿ ಹಾಕಲು ಭೂಮಿಕೆ ನಿರ್ಮಿಸುತ್ತಿದ್ದು, ಈ ಉದ್ದೇಶದಿಂದ ತಾ. 4 ರಂದು ಮೈಸೂರಿನಲ್ಲಿ ಟಿಪ್ಪು ಸತ್ತ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಮತ್ತು ಸಂಘಟಕರ ಚಲನವಲನದ ಬಗ್ಗೆ ನಿಗಾವಹಿಸಬೇಕು.

ಸಾವಿರಾರು ಕೊಡವ ಬುಡಕಟ್ಟು ಯೋಧರನ್ನು ಕುಟುಂಬ ಸಮೇತ ದೇವಟ್ ಪರಂಬ್‍ನಲ್ಲಿ ಮಾರಣ ಹೋಮ ನಡೆಸಿದ್ದಲ್ಲದೇ ಮಂಗಳೂರಿನ ರೋಮನ್ ಕ್ಯಾಥೋಲಿಕರನ್ನು, ಗೌಡ ಸಾರಸ್ವತ ಬ್ರಾಹ್ಮಣ(ಕೊಂಕಣಿ)ರನ್ನು ಮಲಬಾರಿನ ನಾಯರುಗಳನ್ನು, ಮೇಲುಕೋಟೆ ಐಯ್ಯಂಗಾರರನ್ನು, ಕುಂಭಕೋಣಂನ ಐಯ್ಯರ್‍ಗಳನ್ನು ಮತ್ತು ಚಿತ್ರದುರ್ಗದ ಬೇಡ ನಾಯಕರನ್ನು ಚಿತ್ರಹಿಂಸೆಗೊಳಡಿಸಿ ಕೊಂದ ಟಿಪ್ಪುವಿನ ಅನಪೇಕ್ಷಿತ ಜಯಂತಿಯನ್ನು 2015 ರಲ್ಲಿ ಕೊಡಗಿನಲ್ಲಿ ಆಚರಿಸಿ ಕ್ಷೋಭೆ ಸೃಷ್ಟಿಸಿ ಯಶಸ್ವಿಯಾದ ಕೂಟ ಮತ್ತೆ 2017 ರಲ್ಲಿ ಟಿಪ್ಪು ಜಯಂತಿ ಮೂಲಕ ಭಾರೀ ಗಂಡಾಂತರ ಮತ್ತು ಕೋಲಾಹಲ ಸೃಷ್ಟಿಸಿ ಕೊಡಗನ್ನು ಶತಾಯಗತಾಯ ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಾಷ್ಟ್ರದ್ರೋಹಿ ಶಕ್ತಿಗಳು ಹುನ್ನಾರ ನಡೆಸುತ್ತಿವೆ.

ಈ ಹುನ್ನಾರದ ವಿರುದ್ಧ ಮತ್ತವರ ಚಲನವಲನದ ಕುರಿತು ನಿಗಾವಹಿಸಬೇಕು ಹಾಗೂ ಆ ಮೂಲಕ ಅಂತರ್ರಾಷ್ಟ್ರೀಯ ಭಯೋತ್ಪಾದಕರನ್ನು ಬಗ್ಗು ಬಡಿಯುವ ತಮ್ಮ ಬದ್ಧತೆಯನ್ನು ಕೇಂದ್ರ ಸರಕಾರ ಒರೆಗಲ್ಲಿಗೆ ಹಚ್ಚಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಮನವಿಯಲ್ಲಿ ಆಗ್ರಹಿಸಿದೆ.