ಮಡಿಕೇರಿ, ಮೇ 28: ನಗರದಲ್ಲಿರುವ ಯುವಭವನವನ್ನು ಕೊಡಗು ಜಿಲ್ಲಾ ಯುವ ಒಕ್ಕೂಟಕ್ಕೆ ಹಸ್ತಾಂತರಿಸದೇ ಇರುವ ಕ್ರಮವನ್ನು ಖಂಡಿಸಿ ಜೂ. 9 ರಂದು ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ಪ್ರತಿಭಟನೆ ನಡೆಸಲು ಒಕ್ಕೂಟ ನಿರ್ಧರಿಸಿದೆ.ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.

ನಗರ ವ್ಯಾಪ್ತಿಯ ಕರ್ಣಂಗೇರಿ ಗ್ರಾಮದಲ್ಲಿನ ಸರ್ವೆ ನಂ. 512/1ರಲ್ಲಿ 0.10 ಏಕ್ರೆ ನಿವೇಶನ 2004 ರಲ್ಲಿ ಯುವ ಒಕ್ಕೂಟಕ್ಕೆ ಮಂಜೂರಾಗಿದ್ದು, ಈ ನಿವೇಶನದಲ್ಲಿ ಯುವಭವನ ಕಟ್ಟಡ ಒಕ್ಕೂಟದ ಪ್ರಯತ್ನದಿಂದ ನಿರ್ಮಾಣಗೊಂಡಿದೆ. 2013ರಲ್ಲಿ ಕೊಡಗಿಗೆ ಸರ್ಕಾರಿ ಮಹಿಳಾ ಕಾಲೇಜು ಮಂಜೂರಾದ ಸಂದರ್ಭ 6 ತಿಂಗಳವರೆಗೆ ಮಹಿಳಾ ಕಾಲೇಜು ನಡೆಸಲು ಕಟ್ಟಡವನ್ನು ಬಿಟ್ಟು ಕೊಡಲಾಗಿದೆ.

ಆದರೆ ಈ ಬಗ್ಗೆ ಯಾವದೇ ಪ್ರತಿಕ್ರಿಯೆ ಇಲ್ಲಿಯವರೆಗೆ ದೊರೆತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿರುವ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಡುವಂಡ ಬಿ. ಜೋಯಪ್ಪ ಹಾಗೂ ಕಾರ್ಯದರ್ಶಿ ಪಿ.ಪಿ. ಸುಕುಮಾರ್ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭ ವೀರಾಜಪೇಟೆ ಒಕ್ಕೂಟದ ಅಧ್ಯಕ್ಷೆ ಶೀಲಾ ಬೋಪಣ್ಣ, ಸೋಮವಾರಪೇಟೆ ಒಕ್ಕೂಟದ ಅಧ್ಯಕ್ಷ ರವಿ, ಮಡಿಕೇರಿ ಒಕ್ಕೂಟದ ಅಧ್ಯಕ್ಷ ನವೀನ್ ಹಾಗೂ ಪದಾಧಿಕಾರಿಗಳು, ಸಲಹೆಗಾರರು ಹಾಜರಿದ್ದರು.