ಮಡಿಕೇರಿ, ಮೇ 29: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ., ಮಂಜಿನ ನಗರಿಯ ಹೃದಯಭಾಗದಲ್ಲಿರುವ ‘ರಾಜರ ಉದ್ಯಾನ’ ಕ್ಕೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು, ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ನಿಸರ್ಗದ ಸೌಂದರ್ಯವನ್ನು ಸವಿಯಲೆಂದು ಬರುವವರ ವಾಹನಗಳ ನಿಲುಗಡೆಗೆ ಸ್ಥಳವಿಲ್ಲದಿದ್ದರೂ ರಸ್ತೆ ಬದಿಯಲ್ಲೇ ನಿಲ್ಲಿಸುವ ಪರಿಸ್ಥಿತಿಯಿದ್ದರೂ ವಾಹನಗಳಿಗೆ ‘ಶುಲ್ಕ’ ವಿಧಿಸಲಾಗುತ್ತದೆ. ನಿಯಮಾನುಸಾರ ಗುರುತು ಮಾಡಿರುವ ಸ್ಥಳಗಳಲ್ಲಿ ನಿಲುಗಡೆಗೊಳ್ಳುವ ವಾಹನಗಳಿಗೆ ಶುಲ್ಕ ವಿಧಿಸಿದರೆ, ಅಡ್ಡಿಯಿಲ್ಲ. ಆದರೆ, ಇಲ್ಲಿ ನಡೆಯುತ್ತಿರುವದು ‘ದಂಧೆ’ ಎಂಬ ಆರೋಪ ಕೇಳಿ ಬರುತ್ತಿದೆ.
ರಾಜಾಸೀಟ್ ಉದ್ಯಾನ ಮಹಾತ್ಮಾಗಾಂಧಿ ರಸ್ತೆಯ ಒಂದು ಬದಿಯಲ್ಲಿದೆ. ಇಲ್ಲಿ ವಾಹನ ನಿಲುಗಡೆಗೆ ಯಾವದೇ ನಿರ್ದಿಷ್ಟ ಪ್ರದೇಶವಿಲ್ಲ. ಆದರೂ ನಗರಸಭೆ ಉದ್ಯಾನದ ಎದುರಿನ ಭಾಗ ಸೇರಿದಂತೆ ಉದ್ದಕ್ಕೂ ರಸ್ತೆ ವಿಸ್ತರಣೆ ಮಾಡಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದೆ. ವಾಹನ ಶುಲ್ಕ ವಸೂಲಿ ಮಾಡುವ ಕಾರ್ಯವನ್ನು ಟೆಂಡರ್ ಮೂಲಕ ಗುತ್ತಿಗೆ ನೀಡಿದೆ. ಈ ಬಾರಿ ರೂ. 25,30,525ಕ್ಕೆ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರ ತಂಡ ಶುಲ್ಕ ವಸೂಲಿ ಕಾರ್ಯ ಮಾಡುತ್ತಿದೆ.