ಸೋಮವಾರಪೇಟೆ, ಮೇ 29: ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳಿಂದಾಗಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಜಯಗಳಿಸಿ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ ಎಂದು ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ನ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಭರವಸೆ ವ್ಯಕ್ತಪಡಿಸಿದರು.
ರಾಜ್ಯ ಸರಕಾರ 4 ವರ್ಷದ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರದ ಸಾಧನೆಗಳನ್ನು ಜನತೆಯ ಮುಂದೆ ಪ್ರಚಾರ ಪಡಿಸುವದಕ್ಕಾಗಿ ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಐಎನ್ಟಿಯುಸಿ) ವತಿಯಿಂದ ತಾಲೂಕಿನ ತಣ್ಣೀರು ಹಳ್ಳದಲ್ಲಿ ಆಯೋಜಿಸಲಾಗಿದ್ದ ಬೈಕ್ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಐಎನ್ಟಿಯುಸಿ ವತಿಯಿಂದ ಜಿಲ್ಲೆಯಾದ್ಯಂತ ಆಯೋಜಿಸಿದ ಕಾರ್ಯಕ್ರಮಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಯುವಕರು ಹೆಚ್ಚಾಗಿ ಕಾಂಗ್ರೆಸ್ನತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದರು.
ಜಾಥಾಕ್ಕೆ ಚಾಲನೆ ನೀಡಿದ ತಾಲೂಕು ಪಂಚಾಯಿತಿಯ ಸದಸ್ಯ ಬಿ.ಬಿ. ಸತೀಶ್ ಮಾತನಾಡಿ, ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಕೈಗೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಕ್ಷವನ್ನು ಸದೃಢಗೊಳಿಸುವತ್ತ ಮುಂದಾಗ ಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕಳೆದ 4 ವರ್ಷಗಳಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಉತ್ತಮ ಆಡಳಿತ ನಡೆಸಿದೆ. ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ ಉತ್ತಮ ಸ್ಥಾನದಲ್ಲಿದೆ ಎಂದರು.
ಜಾಥಾದಲ್ಲಿ ಐಎನ್ಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಪಂಡ ಮುದ್ದಪ್ಪ, ಜಿಲ್ಲಾಧ್ಯಕ್ಷ ಟಿ.ಪಿ. ಹಮೀದ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ಯುವ ಕಾಂಗ್ರೆಸ್ನ ಕ್ಷೇತ್ರ ಅಧ್ಯಕ್ಷ ಮಿಥುನ್, ತಾ.ಪಂ. ಸದಸ್ಯ ಅನಂತ್ ಕುಮಾರ್, ಪಕ್ಷದ ಮುಖಂಡರುಗಳಾದ ಲಾರೆನ್ಸ್, ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.
ತಣ್ಣೀರುಹಳ್ಳದಿಂದ ಆರಂಭವಾದ ಜಾಥಾ ಆಲೂರು ಸಿದ್ದಾಪುರ ಮಾರ್ಗವಾಗಿ ಹಂಡ್ಲಿ, ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಮಾರ್ಗವಾಗಿ ಮಾದಾಪುರಕ್ಕೆ ತೆರಳಿತು.