ಮಡಿಕೇರಿ, ಮೇ 29: ಸುದೀರ್ಘ ರಜೆಯ ಬಳಿಕ ಜಿಲ್ಲೆಯ ಎಲ್ಲಾ ಶಾಲೆಗಳು ಇಂದಿನಿಂದ ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಜಿಲ್ಲೆಯಲ್ಲಿ ಶಾಲೆಯ ಪುನರಾರಂಭವನ್ನು ಆರಂಭೋತ್ಸವವನ್ನಾಗಿ ಶಾಲೆಗಳಲ್ಲಿ ಆಚರಿಸಲಾಗುತ್ತಿದ್ದು, ಶಾಲಾವರಣವನ್ನು ತಳಿರು ತೋರಣಗಳಿಂದ ಶಿಕ್ಷಕರುಗಳು ಸಿಂಗರಿಸಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಸಂತೋಷ ಸಂಭ್ರಮದಿಂದ ಸ್ವಾಗತ ಕೋರಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು.ಮಡಿಕೇರಿ ನಗರದ ವಿವಿಧ ಶಾಲೆಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳ ಶಾಲೆಗಳಲ್ಲಿ ಇದೇ ಸಂಭ್ರಮ ಕಂಡು ಬಂದಿತು. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಪಾಯಸವನ್ನು ಹಲವು ಶಾಲೆಗಳಲ್ಲಿ ಉಣಬಡಿಸಲಾಯಿತು. ಬಳಿಕ ಹಲವು ಶಾಲೆಗಳು ಮಧ್ಯಾಹ್ನ ನಂತರ ರಜೆ ಘೋಷಿಸಿದವು. ತಾ. 30 ರಿಂದ ಶಾಲೆಗಳು ಎಂದಿನಂತೆ ಕಾರ್ಯಾಚರಿಸಲಿವೆ.

ಸುಂಟಿಕೊಪ್ಪ: ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ಬೇಸಿಗೆ ರಜೆ ಕಳೆದ ಮಕ್ಕಳು ಶಾಲೆಗೆ ಆಗಮಿಸಿದರು.

(ಮೊದಲ ಪುಟದಿಂದ) ಶಾಲೆಯನ್ನು ತಳಿರುತೋರಣಗಳಿಂದ ಸಿಂಗರಿಸಿ ಮಕ್ಕಳನ್ನು ಬರಮಾಡಿಕೊಂಡರು.

ಕೊಡಗರಹಳ್ಳಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಎಸ್.ಬಿ. ಶಂಕರ್, ಕಾರ್ಯದರ್ಶಿ ಕೆ.ಎಸ್. ಮಂಜುನಾಥ್, ಪದಾಧಿಕಾರಿಗಳು ಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ, ಶಿಕ್ಷಕರು ಹಾಗೂ ಶಿಕ್ಷಕಿಯರು ಮಕ್ಕಳಿಗೆ ಅದ್ಧೂರಿ ಸ್ವಾಗತವನ್ನು ಕೋರಿದರಲ್ಲದೆ ಮಕ್ಕಳಿಗೆ ಮಧ್ಯಾಹ್ನ ಸಿಹಿ ಭೋಜನವನ್ನು ಆಡಳಿತ ಮಂಡಳಿಯಿಂದ ತಯಾರಿಸಿ ಶಿಕ್ಷಕ, ಶಿಕ್ಷಕಿಯರು ವಿತರಿಸಿದರು.

ಇದೇ ಸಂದರ್ಭ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ. ನವ್ಯ 601 ಅಂಕವನ್ನು ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ವಿದ್ಯಾರ್ಥಿನಿಗೆ ಶಾಲಾಡಳಿತ ಮಂಡಳಿ ಅಧ್ಯಕ್ಷÀ ಎಸ್.ಬಿ. ಶಂಕರ್, ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ಹಾಗೂ ಮುಖ್ಯೋಪಾಧ್ಯಾಯನಿ ಇಂದಿರಾ, ಶಾಲಾಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಶಿಕ್ಷಕ ವರ್ಗದವರು ವಿದ್ಯಾರ್ಥಿನಿಯ ಸಾಧನೆಯನ್ನು ಪ್ರಂಶಸಿಸಿ ಅಭಿನಂದಿಸಿದರಲ್ಲದೆ ಶಾಲಾ ಆಡಳಿತ ಮಂಡಳಿ ವತಿಯಿಂದ ಈಕೆಯ ಉನ್ನತ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಿದರು.

ಅಯ್ಯಂಗೇರಿ: ಶಾಲಾ ಪ್ರಾರಂಭೋತ್ಸವ ದಿನವನ್ನು ಅಯ್ಯಂಗೇರಿ ಸರಕಾರಿ ಶಾಲೆಯಲ್ಲಿ ಆಚರಿಸಲಾಯಿತು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಭೇಟಿ ನೀಡಿದರು. ಈ ಸಂದರ್ಭ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೇವೆ ಎಂಬ ಕೀಳರಿಮೆ ಬೇಡ. ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ದೇಶ-ವಿದೇಶಗಳಲ್ಲಿ ಖ್ಯಾತಿ ಹೊಂದಿ, ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ನೀವೂ ಅದೇ ಮಾರ್ಗದಲ್ಲಿ ನಡೆಯಿರಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ಶಿಥಿಲಾವಸ್ಥೆ ಯಲ್ಲಿದ್ದ ಶಾಲಾ ಕಟ್ಟಡವನ್ನು ವೀಕ್ಷಿಸಿ ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಗ್ರಾಮಸ್ಥರು, ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದÀದವರು ಹಾಜರಿದ್ದರು.

ಸೋಮವಾರಪೇಟೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ವತಿಯಿಂದ ಪಟ್ಟಣದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಪಟ್ಟಣದ ವಿವಿಧ ಶಾಲಾ ಮಕ್ಕಳು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ತೆರಳಿದರು. ಉತ್ತಮ ಶಿಕ್ಷಣಕ್ಕಾಗಿ, ಉಜ್ವಲ ಭವಿಷ್ಯಕ್ಕಾಗಿ, ಉಚಿತ ಹಾಗೂ ಸರಕಾರಿ ಸೌಲಭ್ಯಗಳೊಂದಿಗೆ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿಗಳು ತೆರಳಿದರು.

ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ ಮತ್ತು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯ ಶಿಕ್ಷಕಿ ಅಣ್ಣಮ್ಮ ಚಾಲನೆ ನೀಡಿದರು. ಪಟ್ಟಣದ ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.

ಶನಿವಾರಸಂತೆ: ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಯೋಜನೆಯನ್ವಯ ಸಿಗುವ ಉಚಿತ ಸೌಲಭ್ಯಗಳನ್ನು ಪೋಷಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾ.ಪಂ. ಸದಸ್ಯೆ ಲೀಲಾವತಿ ಅಭಿಪ್ರಾಯಪಟ್ಟರು.

ಸಮೀಪದ ಹಾರೆಹೊಸೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಂಡ್ಲಿ ಸಮೂಹ ಸಂಪನ್ಮೂಲ ಕೇಂದ್ರದ ಸಹಕಾರದೊಂದಿಗೆ 2017-18ನೇ ಸಾಲಿನ ವಿಶೇಷ ದಾಖಲಾತಿ ಆಂದೋಲನ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಮಧುಕುಮಾರ್ ಮಾತನಾಡಿ, ಸರಕಾರದ ಆದೇಶದನ್ವಯ ತಾ. 16 ರಿಂದ 31ರ ವರೆಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ವಿಶೇಷ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಜೂ. 1 ರಿಂದ 30 ರವರೆಗೆ ಸಾಮಾನ್ಯ ದಾಖಲಾತಿ ನಡೆಯಲಿದೆ. ಶಿಕ್ಷಕರು ಪೋಷಕರ ಮನವೊಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.

ವಿದ್ಯಾರ್ಥಿಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಶಿಕ್ಷಕರು ಗ್ರಾಮದ ಪ್ರಮೀಳಾ-ವೆಂಕಟೇಶ್ ದಂಪತಿಯ 5 ವರ್ಷ 10 ತಿಂಗಳು ತುಂಬಿದ ಮಗು ತನುಷ್‍ನ ದಾಖಲಾತಿ ಮಾಡಿಕೊಂಡರು.

ನಂತರ ಕುರುಬರ ಹಾಡಿಗೆ ತೆರಳಿದ ಶಿಕ್ಷಕರು ಅಲ್ಲಿದ್ದ ಮಕ್ಕಳಲ್ಲಿ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಿದರು. ಈ ಸಂದರ್ಭ ಮುಖ್ಯ ಶಿಕ್ಷಕಿ ಲಲಿತಾ, ಸಹಶಿಕ್ಷಕರಾದ ಆರ್. ದಿವಾಕರ್, ಟಿ.ಆರ್. ಕವಿತಾ, ಎಚ್.ಕೆ. ಸುಂದರ್, ನಾಗರತ್ನ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹೂವಮ್ಮ, ಸದಸ್ಯರು ಪಾಲ್ಗೊಂಡಿದ್ದರು.

ಕುಶಾಲನಗರ: ಸರಕಾರಿ ಶಾಲಾ ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಬೇಕಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಎಂ.ಎಂ.ಚರಣ್ ಕರೆ ನೀಡಿದರು.

ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2017-18ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳ ಶಿಕ್ಷಣ ಕೂಡ ಉತ್ತಮ ಗುಣಮಟ್ಟದ್ದಾಗಿದೆ. ಪೋಷಕರು ಸರಕಾರಿ ಶಾಲೆಯೆಂಬ ಅಸಡ್ಡೆ ತೋರದೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ ಶಿಕ್ಷಣ ಕೊಡಿಸಲು ಮುಂದಾಗಬೇಕಿದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ.ಟಿ. ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ನಿಜಾಂ, ಶಾಲೆಯ ಹಿರಿಯ ಶಿಕ್ಷಕ ಪ್ರಕಾಶ್, ಹೆಚ್.ಎಸ್.ಪ್ರಕಾಶ್, ಹಾಗೂ ಶಾಲೆಯ ಶಿಕ್ಷಕರು, ಪೋಷಕ ವೃಂದದವರು ಭಾಗಿಯಾಗಿದ್ದರು.