ವೀರಾಜಪೇಟೆ, ಮೇ 29: ವೀರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯ ಮನೆಯೊಂದರಲ್ಲಿ ಕಳವು ಮಾಡಿದ್ದ ರೂ. ಎರಡು ಲಕ್ಷದ ಎಪ್ಪತ್ತು ಸಾವಿರ ಮೌಲ್ಯದ ಎರಡು ಚಿನ್ನದ ಸರವನ್ನು ಅಪರಾಧ ಪತ್ತೆ ದಳದ ಸಬ್ ಇನ್ಸ್‍ಪೆಕ್ಟರ್ ಅಪ್ಪಾಜಿ ಅವರ ತಂಡ ಪತ್ತೆಹಚ್ಚಿದ್ದು, ಕಳವು ಮಾಡಿದ ಎಚ್.ಎಂ. ಸೀತಮ್ಮ ಎಂಬಾಕೆಯನ್ನು ಬಂಧಿಸಿ ಇಲ್ಲಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಆಕೆಯನ್ನು 15 ದಿನಗಳ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿದ್ದಾರೆ.

ಇಲ್ಲಿನ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಪಿ.ಗಂಗಮ್ಮ ಎಂಬವರ ಮನೆಗೆ ಮನೆ ಕೆಲಸಕ್ಕೆಂದು ಸೇರಿಕೊಂಡಿದ್ದ ಕೆ. ಬೋಯಿಕೇರಿಯ ಸೀತಮ್ಮ ಎಂಬಾಕೆ ಐದು ದಿನಗಳ ಹಿಂದೆ 100 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಅಪಹರಿಸಿ, ಒಂದು ಸರವನ್ನು ರೂ. 65000ಕ್ಕೆ ಬ್ಯಾಂಕ್‍ನಲ್ಲಿ ಅಡವು ಇಟ್ಟಿದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮನೆಯಲ್ಲಿಟ್ಟಿದ್ದ ಮತ್ತೊಂದು ಸರವನ್ನು ಪೊಲೀಸರು ಶೋಧಿಸಿ ಎರಡು ಸರಗಳನ್ನು ವಶಪಡಿಸಿಕೊಂಡಿದ್ದಾರೆ.

ಸರಗಳನ್ನು ಕಳೆದುಕೊಂಡಿದ್ದ ಗಂಗಮ್ಮ ಹಾಗೂ ಕುಟುಂಬದವರು ಮನೆಯಲ್ಲೆಲ್ಲ ಹುಡುಕಿ ನಂತರ ಸೀತಮ್ಮನ ಚಲನ ವಲನಗಳ ಮೇಲೆ ನಿಗಾ ಇರಿಸಿ ಸಂಶಯಗೊಂಡು ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಪತ್ತೆಹಚ್ಚುವ ಕಾರ್ಯಾಚರಣೆ ಆರಂಭಿಸಿದಾಗ ಚಿನ್ನದ ಸರ ಸಮೇತ ಸೀತಮ್ಮ ಸಿಕ್ಕಿ ಬಿದ್ದಿದ್ದಾಳೆ.