ಆಲೂರು ಸಿದ್ದಾಪುರ, ಮೇ 29: ಶನಿವಾರಸಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಳುವ ಹಂತದಲ್ಲಿದ್ದು, ನಿತ್ಯ ಜೀವಭಯದಲ್ಲಿ ಇಲ್ಲಿಯ ವಿದ್ಯಾರ್ಥಿಗಳು ದಿನತಳ್ಳುವ ಪರಿಸ್ಥಿತಿ ಬಂದೊದಗಿದೆ. ಅಧಿಕಾರಿ ಗಳು ಕಂಡು ಕಾಣದಂತೆ ವರ್ತಿಸುತ್ತಿ ದ್ದಾರೆ. ರಜೆ ಮುಗಿಸಿ ವಿದ್ಯಾರ್ಥಿಗಳು ಶಾಲೆಗೆ ಹಿಂದಿರುಗುವಾಗ ನಮ್ಮ ಶಾಲೆ ದುರಸ್ತಿ ಕಂಡಿರಬಹುದು ಎಂದು ಆಲೋಚಿಸಿ ಬಂದರೆ ವಿದ್ಯಾರ್ಥಿಗಳಿಗೆ ಮತ್ತದೇ ಹಳೇ ಬೀಳುವ ಕಟ್ಟಡದ ದರ್ಶನವಾಗಿದೆ.
ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶವಿದೆ ಅದರೆ ಶಾಲೆಯ ಸಮಸ್ಯೆಗಳಿಂದಾಗಿ ಬೇಸತ್ತು ಕೆಲ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ, ಈ ಶಾಲೆಗೆ ಸುಮಾರು 100 ವರ್ಷವಾಗಿದ್ದು, ಇಲ್ಲಿಯ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗವನ್ನು ಅಲಂಕರಿಸಿದ್ದಾರೆ.
ವಿಪರ್ಯಾಸವೆಂದರೆ ಶತಮಾನದ ಸಂಭ್ರಮದಲ್ಲಿರುವ ಈ ಹಳೆಯ ಶಾಲಾ ಕಟ್ಟಡದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾ ದಂತೆ ಕೊಠಡಿಗೆ ಬೀಗ ಜಡಿದರು. ನಂತರ ಮತ್ತೊಂದು ಕಟ್ಟಡವನ್ನು ಇದಕ್ಕೆ ಹೊಂದಿಕೊಂಡಂತೆ ನಿರ್ಮಾಣ ಮಾಡಿದರು, ಅದರಲ್ಲಿ ಪಾಠ ಪ್ರವಚನಗಳು ನಡೆಸಿದರೆ, ಈ ದುಸ್ಥಿತಿಯಲ್ಲಿರುವ ಶತಮಾನದ ಕಟ್ಟಡದ ಬಳಿಯಲ್ಲೆ ಅಕ್ಷರ ದಾಸೋಹದ ಬಿಸಿಯೂಟ ಕೊಠಡಿ ಇದ್ದು ಇದರಲ್ಲೇ ಪ್ರತಿನಿತ್ಯ ಬಿಸಿಯೂಟ ತಯಾರಾಗುತ್ತಿದೆ. ಈ ದುಸ್ಥಿತಿಯಲ್ಲಿರುವ ಕಟ್ಟಡದ ಅಡಿಯಲ್ಲೇ ಇಲ್ಲಿಯ ವಿದ್ಯಾರ್ಥಿಗಳು ಊಟ ಮಾಡಬೇಕಾಗಿದೆ. ಈ ವರ್ಷವೂ ಸಹ ಬೀಳುವ ಹಂತದ ಕಟ್ಟಡದ ಅಡಿಯಲ್ಲೇ ವಿದ್ಯಾರ್ಥಿಗಳು ಶೌಚಾಲಯಕ್ಕೆ ಪ್ರಾಣವನ್ನು ಕೈಯಲ್ಲಿ ಹಿಡಿದು ತೆರಳಬೇಕು.
ಹೋಬಳಿ ಕೇಂದ್ರದ ಸರ್ಕಾರಿ ಶಾಲೆ ಅವ್ಯವಸ್ಥೆಗಳಿಂದ ಕೂಡಿರುವದು ಸಂಬಂದ ಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವಲ್ಲದೇ ಮತ್ತೇನು ಎನ್ನಬೇಕು.
ಕೊಠಡಿಗಳ ಹೆಂಚುಗಳು ಕಂಡವರ ಪಾಲಾದಂತಿದೆ. ಕಟ್ಟಡಗಳ ತಳಪಾಯ ಕುಸಿಯುತ್ತಿದೆ. ಮೇಲೆ ಅಳವಡಿಸಿರುವ ಮರದ ಪಟ್ಟಿಗಳು ಗೆದ್ದಲು ಹಿಡಿದಿದ್ದು, ಯಾವ ಸಂದರ್ಭದಲ್ಲಾದರೂ ಬೀಳುವ ಸಾಧ್ಯತೆ ಇದೆ. ಶಾಲಾಭಿವೃದ್ದಿ ಸಮಿತಿಯವರು, ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಕೇವಲ ವೇದಿಕೆಗಳಲ್ಲಿ ಕನ್ನಡ ಸರ್ಕಾರಿ ಶಾಲೆಗಳಲ್ಲಿಯ ಸೌಲಭ್ಯಗಳ ಪಟ್ಟಿಯನ್ನು ಓದುವ ಅಧಿಕಾರಿಗಳು ಜನಪ್ರತಿನಿಧಿಗಳು ಅವ್ಯವಸ್ಥೆಯ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂಬವದು ಸ್ಥಳೀಯರ ಪ್ರ್ರಶ್ನೆಯಾಗಿದೆ.
-ಚಿತ್ರ, ವರದಿ : ದಿನೇಶ್ ಮಾಲಂಬಿ