ವೀರಾಜಪೇಟೆ ಮೇ3 0: ಕದನೂರು ಹೊಳೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಗ್ರಾಮಸ್ಥರು ಬೆಳಗಿನ ಜಾವ ಕಾದು ಪತ್ತೆ ಹಚ್ಚಿ ಪೋಲಿಸರಿಗೆ ಹಿಡಿದು ಕೊಟ್ಟಿರುವ ಘಟನೆ ಮೈತಾಡಿ ಗ್ರಾಮದಲ್ಲಿ ನಡೆದಿದೆ.

ಮೈತಾಡಿ ಗ್ರಾಮದ ಮಂದಣ್ಣ ಸ್ಥಳಕ್ಕೆ ತೆರಳಿದ ಮಾಧ್ಯಮದವರೊಂದಿಗೆ ಮಾತನಾಡಿ ಪ್ರತಿದಿನ ರಾತ್ರಿ ಕದನೂರು ಹೊಳೆಯ ಬದಿಯಿಂದ 2-3 ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಪೋಲಿಸರಿಗೆ ದೂರು ನೀಡಲಾಗಿದೆಯಾದರೂ ಪ್ರಭಾವಿಗಳ ಕೈವಾಡದಿಂದ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟ ಮುಂದುವರೆದಿತ್ತು. ಕದನೂರು ಹೊಳೆಯಲ್ಲಿ ಮರಳು ಇಲ್ಲದಿದ್ದರೂ ನದಿ ದಡವನ್ನು ಅಗೆದು ನೀರಿಗೆ ಹಾಕಿ ಮಣ್ಣು ಮಿಶ್ರಿತ ಮರಳನ್ನು ಪ್ರತಿ ಲಾರಿ ಲೋಡಿಗೆ 18 ಸಾವಿರದಿಂದ 20 ಸಾವಿರದವರೆಗೆ ಮಾರಾಟ ಮಾಡುತ್ತಿದ್ದಾರೆ. ನದಿಯ ಬದಿಯನ್ನು ಕೊರೆಯುವದರಿಂದ ನದಿ ಅಗಲವಾಗುತ್ತಿದೆ. ಪಕ್ಕದಲ್ಲಿರುವ ವಿದ್ಯುತ್ ಕಂಬಗಳು ಧರೆಗೆ ಉರುಳುವ ಸ್ಥಿತಿಯಲ್ಲಿವೆ.. ಇಂದು ಬೆಳಗಿನ ಜಾವ 4 ಗಂಟೆಗೆ ಮರಳು ತುಂಬಲು ಲಾರಿ ಬಂದ ಬಳಿಕ ಗ್ರಾಮಸ್ಥರು ಸೇರಿ ಮರಳು ಲಾರಿಯನ್ನು ತಡೆದಾಗ ಚಾಲಕರು, ಕ್ಲೀನರ್‍ಗಳು, ಕಾರ್ಮಿಕರು ಲಾರಿ ಹಾಗೂ ಮೊಬೈಲ್‍ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಿದರು.

ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಗ್ರಾಮಸ್ತರು ದೂರವಾಣಿ ಮೂಲಕ ಜಿಲ್ಲಾಧಿಕಾರಿಗೆ ದೂರು ನೀಡಿದ ಮೇರೆ ಗ್ರಾಮಾಂತರ ಪೋಲಿಸರು ಕದನೂರು ಹೊಳೆಯ ಬದಿಯಲ್ಲಿ ಮರಳು ತುಂಬಿದ ವೀರಾಜಪೇಟೆಯ (ಕೆಎಲ್13 ಎನ್. 2449) ಹಾಗೂ (ಕೆ.ಎ.12ಎ 5041) ಎರಡು ಲಾರಿಗಳ ಸಹಿತ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾಧಿಕಾರಿಯವರು ಈ ಸಂಬಂಧ ಮೈಸೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೂ ದೂರು ನೀಡಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆಯನ್ನು ಪತ್ತೆ ಹಚ್ಚಲು ಬೆಳಗಿನ ಜಾವದಿಂದಲೇ ಗ್ರಾಮಸ್ಥರು ಕದನೂರು ಹೊಳೆಯ ಬದಿಯಲ್ಲಿ ಜಮಾಯಿಸಿದ್ದರು.