ಮಡಿಕೇರಿ, ಮೇ 31: ಅಲ್ಲಿ-ಇಲ್ಲಿ ಹೊಟೇಲ್‍ಗಳಿಗೆ ನೀರು ಹೊತ್ತೊಯ್ದು ಸಿಕ್ಕುವ ಹಣದಲ್ಲಿ ಹೊಟ್ಟೆ ಹೊರೆಯುತ್ತಿದ್ದ..., ಬಡ ಕುಟುಂಬಕ್ಕೆ ಆಶ್ರಯದಾತನಾಗಿದ್ದಾತ ಇದೀಗ ಆಸರೆಗಾಗಿ ಅಂಗಲಾಚುತ್ತಾ ಆಸ್ಪತ್ರೆಯಲ್ಲಿ ಕಳೆಯುತ್ತಿರುವ ಕರುಣಾಜನಕ ಪರಿಸ್ಥಿತಿ ಈ ಬಡವನಿಗೆ ಬಂದೊದಗಿದೆ. ಬೈಕೊಂದು ಡಿಕ್ಕಿಯಾಗಿ ಸೊಂಟ, ತಲೆಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಕಳೆಯುವಂತಾಗಿದೆ.

ಇಲ್ಲಿಗೆ ಸನಿಹದ ಅಭ್ಯತ್‍ಮಂಗಲ ಪೈಸಾರಿ ನಿವಾಸಿ ಮಣಿ ಎಂಬಾತ ಸಿದ್ದಾಪುರದಲ್ಲಿ ಪ್ರತಿನಿತ್ಯ ಎಣ್ಣೆ ಡಬ್ಬಿಗಳಲ್ಲಿ (ಟಿನ್) ಬಾವಿ, ಬೋರ್‍ವೆಲ್‍ಗಳಿಂದ ನೀರು ತುಂಬಿಕೊಂಡು ಹೊಟೇಲ್‍ಗಳಿಗೆ ಹೊತ್ತೊಯ್ದು ಅದರಲ್ಲಿ ಸಿಕ್ಕುವ ಹಣದಿಂದ ಕುಟುಂಬ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದ. ತೀರಾ ಬಡತನದಲ್ಲಿರುವ ಈತನಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದು, ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ. ತಾ. 28 ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಈತನಿಗೆ ಪಲ್ಸರ್ ಬೈಕೊಂದು (ಕೆಎ 12 8136) ಡಿಕ್ಕಿಯಾಗಿದೆ. ಪೊಲೀಸರೊಬ್ಬರು ಚಾಲಿಸುತ್ತಿದ್ದ ಬೈಕ್ ಡಿಕ್ಕಿಯಾಗಿದ್ದು, ರಸ್ತೆಗೆ ಬಿದ್ದ ಮಣಿಯ ತಲೆ ಹಾಗೂ ಸೊಂಟಕ್ಕೆ ಪೆಟ್ಟಾಗಿದೆ. ಗಾಯಗೊಂಡ ಮಣಿಯನ್ನು ಡಿಕ್ಕಿಪಡಿಸಿದವರೇ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೈಸೂರುವರೆಗೆ ಸಾಗಿಸಲು ಮಾನವೀಯತೆ ಮೆರೆದವರು ನಂತರದಲ್ಲಿ ಆತನನ್ನು ತಿರುಗಿಯೂ ನೋಡದಿರುವದು ದುರಂತವೇ ಸರಿ...!

ಇದೀಗ ಗಂಭೀರ ಸ್ಥಿತಿಯಲ್ಲಿ ತೀವ್ರ ನಿಗಾ ಘಟಕದಲ್ಲಿರುವ ಮಣಿಯ ಚಿಕಿತ್ಸೆಗೆ ಔಷಧಿಗಳಿಗೆ ವೆಚ್ಚ ಭರಿಸಲಾಗದ ಸ್ಥಿತಿಯಲ್ಲಿ ಕುಟುಂಬ ಇದೆ. ನೋವು - ಸಾವಿನ ನಡುವೆ ಮಣಿ ತೊಳಲಾಡುತ್ತಿದ್ದರೆ, ಇತ್ತ ಆತನ ಕುಟುಂಬ ಕಣ್ಣೀರಿನಲ್ಲಿ ಕರಗುತ್ತಿದೆ. ಅಪಘಾತವಾಗಿ ಗಂಭೀರ ಗಾಯಗಳಾಗಿದ್ದರೂ, ಯಾವದೇ ಪ್ರಕರಣ ದಾಖಲಾಗದೇ ಇರುವದು ಕೂಡ ‘ಬಡವರ ಪಾಲಿನ ನ್ಯಾಯ’ ಎಲ್ಲಿದೆ ಎಂಬದನ್ನು ತೋರ್ಪಡಿಸುತ್ತಿದೆ.

ಅಂಚೆಮನೆ ಸುಧಿ.