ಮಡಿಕೇರಿ, ಮೇ 30: ಮಡಿಕೇರಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜೂ. 16 ರಂದು ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆ ಮೂಲಕ ಸಮ್ಮೇಳನ ಸ್ಥಳವಾದ ಕಾವೇರಿ ಕಲಾಕ್ಷೇತ್ರಕ್ಕೆ ಕರೆದೊಯ್ಯಲು ತೀರ್ಮಾನಿಸಲಾಯಿತು.

ಕಸಾಪ ಕಚೇರಿಯಲ್ಲಿ ಮೆರವಣಿಗೆ ಸಮಿತಿ ಅಧ್ಯಕ್ಷ ಎಂ.ಬಿ. ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಮಹಿಳೋದಯ ಮಹಿಳಾ ಒಕ್ಕೂಟ, ನೆಲ್ಲಕ್ಕಿ ಯುವತಿ ಮಂಡಳಿ, ಸ್ತ್ರೀಶಕ್ತಿ ಗುಂಪುಗಳ ಕಳಶ ಹೊತ್ತ ಮಹಿಳೆಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಕೊಡವ ಸಾಂಪ್ರದಾಯಿಕ ವಾಲಗ, ಚಂಡೆ, ಕಂಗೀಲು ನೃತ್ಯ, ಉಮ್ಮತ್ತಾಟ್ ಸೇರಿದಂತೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸುವಂತೆ ತೀರ್ಮಾನಿಸಲಾಯಿತು. ನಗರದ ಕೋಟೆ ಆವರಣದಿಂದ ಹೊರಟು ಬಸ್ ನಿಲ್ದಾಣಕ್ಕಾಗಿ, ಇಂದಿರಾಗಾಂಧಿ ವೃತ್ತದಿಂದ ಹಿಂದಿರುಗಿ ಜ. ತಿಮ್ಮಯ್ಯಕ್ಕಾಗಿ ಕಾವೇರಿ ಕಲಾಕ್ಷೇತ್ರಕ್ಕೆ ಆಗಮಿಸುವಂತೆ ತೀರ್ಮಾನಿಸಲಾಗಿದೆ. ಮಳೆ ಅಧಿಕವಿದ್ದಲ್ಲಿ ಕೋಟೆ ಆವರಣದಿಂದ ಕಾವೇರಿ ಕಲಾಕ್ಷೇತ್ರದವರೆಗೆ ಮೆರವಣಿಗೆ ನಡೆಸುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಸಮಿತಿ ಸಂಚಾಲಕ ಪಿ.ಪಿ. ಸುಕುಮಾರ್, ಕಸಾಪ ಗೌರವ ಕಾರ್ಯದರ್ಶಿ ಕೂಡಕಂಡಿ ದಯಾನಂದ, ಓಡಿಪಿ ಸಂಸ್ಥೆಯ ಜಾಯ್ಸ್ ಮೆನೆಜಸ್, ಶಿಕ್ಷಣ ಇಲಾಖೆ ಅಧಿಕಾರಿ ಇನ್ನಿತರರು ಪಾಲ್ಗೊಂಡಿದ್ದರು.