ಸುಂಟಿಕೊಪ್ಪ, ಮೇ 31: ಎಲ್ಲಾ ವರ್ಗದವರ ಏಳಿಗೆಗಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ರಹಿತವಾಗಿ 4 ವರ್ಷಗಳನ್ನು ಪೂರೈಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ (ಪ್ರಬಾರ) ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.
ಭಾರತೀಯ ರಾಷ್ಟ್ರೀಯ ಮಜ್ದೂರು ಕಾಂಗ್ರೆಸ್ (ಐಎನ್ಟಿ ಯುಸಿ) ವತಿಯಿಂದ ಕರ್ನಾಟಕ ಸರಕಾರದ ಭರವಸೆಯ ನಡಿಗೆ 5ನೇ ವರ್ಷದೆಡೆಗೆ ಎಂಬ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಬೈಕ್ ಜಾಥಾವನ್ನು ಸುಂಟಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಲ್ಲಿ ಉದ್ಘಾಟಿಸಿ ವಾಹನ ಚಾಲಕರ ನಿಲ್ದಾಣದ ಬಳಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ, ಪಶುಭಾಗ್ಯ, ಮನಸ್ವಿನಿ ಯೋಜನೆ, ಕ್ಷೀರಭಾಗ್ಯ, ಚೇತನ ಯೋಜನೆಯಿಂದ ಗ್ರಾಮೀಣ ಪ್ರದೇಶ ಜನರ ಬದುಕು ಹಸನಾಗಿದೆ. ಎಲ್ಲಾ ವರ್ಗದವರ ಶ್ರೇಯೋಭಿ ವೃದ್ಧಿಗಾಗಿ ಹಲವಾರು ಯೋಜನೆ ಗಳನ್ನು ಸಿದ್ದರಾಮಯ್ಯ ಸರಕಾರ ಜಾರಿಗೆ ತಂದಿದ್ದು ಭ್ರಷ್ಟ್ಟಾಚಾರದಿಂದ ದೂರವಾಗಿ ಆಡಳಿತ ನಡೆಸಿದ್ದರಿಂದ ಜನಪ್ರಿಯತೆಗಳಿಸಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಮಾತನಾಡಿ, ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಜಾಗೃತಿ ಮೂಡಿಸಲು ರ್ಯಾಲಿ ಏರ್ಪಡಿಸಿರುವದು ಸ್ವಾಗತಾರ್ಹ ವಾದುದು; ಕಾಂಗ್ರೆಸ್ನಿಂದ ಮಾತ್ರ ಸಮಾಜದಲ್ಲಿ ಸಹಬಾಳ್ವೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಐಎನ್ಟಿಯುಸಿಯ ರಾಜ್ಯ ಉಪಾಧ್ಯಕ್ಷ ಎನ್.ಎಂ. ಮುತ್ತಪ್ಪ ಸ್ವಾಗತಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯರುಗಳಾದ ಪಿ.ಎಂ. ಲತೀಫ್, ಸುನಿತಾ ಮಂಜುನಾಥ್, ಕುಮುದಾ ಧರ್ಮಪ್ಪ, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ನಾಪೋಕ್ಲು ಗ್ರಾ.ಪಂ. ಅಧ್ಯಕ್ಷ ಇಸ್ಮಾಯಿಲ್, ಚೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷೆ ವತ್ಸಲ, ಪಂಚಾಯಿತಿ ಸದಸ್ಯರುಗಳಾದ ಕೆ.ಇ. ಕರೀಂ, ರಜಾಕ್, ಐಎನ್ಟಿಯುಸಿಯ ಜಿಲ್ಲಾಧ್ಯಕ್ಷ ಟಿ.ಪಿ. ಹಮೀದ್, ರಾಜ್ಯ ಜಂಟಿ ಕಾರ್ಯದರ್ಶಿ ಎನ್.ಎಂ. ಮುದ್ದಪ್ಪ, ಸುಂಟಿಕೊಪ್ಪ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎನ್.ಸಿ. ಪೊನ್ನಪ್ಪ, ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಐ. ರಫೀಕ್, ಸುಂಟಿಕೊಪ್ಪ ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ಪಿ.ಎಫ್. ಸಬಾಸ್ಟಿನ್, ಎಂ.ಎ. ಉಸ್ಮಾನ್, ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಶೌಕತ್, ಕಾಂಗ್ರೆಸ್ ಕಾರ್ಯಕರ್ತರು ಮೊದಲಾದವರು ಇದ್ದರು.