ಆಲೂರುಸಿದ್ದಾಪುರ, ಮೇ 31: ಸಮೀಪದ ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಸ್‍ಡಿಎಂಸಿ ಸಮಿತಿ ಮತ್ತು ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧುಮೇಹ, ರಕ್ತದೊತ್ತಡ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಕೃಷ್ಣಾನಂದ್, ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆ ಒಂದಕ್ಕೊಂದು ಸಂಬಂಧ ಹೊಂದಿರುವ ರೋಗವಾಗಿದ್ದು ಇಂದಿನ ದಿನದಲ್ಲಿ ಚಿಕ್ಕ ಮಕ್ಕಳಿನಿಂದÀ ಹಿಡಿದು ವಯೋವೃದ್ದರನ್ನೂ ಕಾಡುವ ಸಮಸ್ಯೆ ಇದಾಗಿದೆ ಎಂದರು. ಮಧುಮೇಹ ರೋಗ ಕೇವಲ ವ್ಯಕ್ತಿಯ ಆಹಾರ ಪದ್ದತಿ ಮತ್ತು ಆತನ ಆರೋಗ್ಯಕ್ಕೆ ಸಂಬಂಧಪಡುವಂತಹ ರೋಗವಾಗಿಲ್ಲ, ಇದು ಅನುವಂಶೀಯವಾಗಿಯೂ ಬರುತ್ತದೆ, ಮಧುಮೇಹ ಸಮಸ್ಯೆ ಸಂಬಂಧ ತನ್ನ ದೇಹದಲ್ಲಿ ವ್ಯತ್ಯಾಸವಾಗುತ್ತಿದ್ದರೂ, ವೈದ್ಯರಲ್ಲಿ ಹೋಗಿ ರಕ್ತ ಮತ್ತು ಆರೋಗ್ಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವದಿಲ್ಲ, ಇದರಿಂದ ಮಧುಮೇಹದ ಅಂಶ ಹೆಚ್ಚಾಗಿ ಸಮಸ್ಯೆ ಉಲ್ಬಣಗೊಳ್ಳುತ್ತದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ವೈದ್ಯರಲ್ಲಿಗೆ ಹೋಗಿ ರಕ್ತ ಮತ್ತು ಆರೋಗ್ಯ ಪರೀಕ್ಷೆಯನ್ನು ಮಾಡಿಸಿಕೊಂಡು ಮಧುಮೇಹದ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕೆಂದರು.

ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ತಪಾಸಣಾ ಶಿಬಿರದ ಉಪಯೋಗವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮವನ್ನು ಗ್ರಾಮದ ಹಿರಿಯ ಮಹಿಳೆ ಕುಮುದ ಉದ್ಘಾಟಿಸಿದರು. ಈ ಸಂದರ್ಭ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಇಂದೂದರ್, ಗ್ರಾಮದ ಹಿರಿಯ ಧರ್ಮಪ್ಪ, ಶಾಲಾ ಮುಖ್ಯ ಶಿಕ್ಷಕಿ ಮರೀನ, ಎಸ್‍ಡಿಎಂಸಿ ಅಧ್ಯಕ್ಷ ಸಿದ್ದಲಿಂಗಪ್ಪ, ಶಿಕ್ಷಕರಾದ ಸುನಿತ, ಎಚ್.ಎಸ್. ರಾಜಪ್ಪ, ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕ ಶಿವಪ್ರಕಾಶ್, ವಿನಯ್, ಮುರುಳಿ, ಶಶಿಕಲಾ, ಅಂಬಿಕಾ ಮುಂತಾದವರು ಇದ್ದರು. ಶಿಬಿರದಲ್ಲಿ ಮಧುಮೇಹ ಉಲ್ಲಣಗೊಂಡ ರೋಗಿಗಳಿಗೆ ಉಚಿತವಾಗಿ ಇಸಿಜಿ ಪರೀಕ್ಷೆಯನ್ನು ಮಾಡಿಸಲಾಯಿತು.