ಮಡಿಕೇರಿ, ಮೇ 31: ಪ್ರಸ್ತುತದ ದಿನಗಳಲ್ಲಿ ಮೊಬೈಲ್ ಬಳಸದಿರುವವರು ಬಹುತೇಕ ಯಾರೂ ಇಲ್ಲ. ಮೊಬೈಲ್ ಮೇನಿಯಾವನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಸಖಕತ್ತಾಗಿಯೇ ಬಳಸಿಕೊಳ್ಳುತ್ತಿದ್ದಾರೆ.

ಹಲವಾರು ರೀತಿಯಲ್ಲಿ ಗ್ರಾಹಕರು ವಂಚನೆಗೆ ಒಳಗಾಗುತ್ತಿದ್ದಾರೆ. ಎಲ್ಲರಿಗೂ ಈಗಿನ ನೂತನ ತಂತ್ರಜ್ಞಾನದ ಅರಿವು ಇಲ್ಲ. ಆದರೆ ಈ ಅಸಹಾಯಕತೆ ಮುಗ್ಧತೆಯನ್ನು ದುರುಪಯೋಗಮಾಡಿಕೊಳ್ಳುತ್ತಿರುವದು ವಿವಿಧ ಕಂಪೆನಿಗಳಿಗೆ ಕಪ್ಪುಚುಕ್ಕೆಯಾಗಿದೆ. ನಿಮ್ಮ ನಂಬರ್‍ಗೆ ಕಂಪೆನಿಗಳಿಂದಲೇ ಕಾಲ್ ಬರುತ್ತದೆ. ‘ಈ ಹಾಡು ನಿಮಗೆ ಇಷ್ಟವಾಗಿದ್ದಲ್ಲಿ ಸ್ಟಾರ್ ಅನ್ನು ಒತ್ತಿ’ ಭವಿಷ್ಯವಾಣಿ, ಪ್ಯಾಕೇಜ್ ಈ ರೀತಿಯಾಗಿ ಏನೇನೋ ಸಂದೇಶಗಳು ಬರುತ್ತವೆ. ಇತರೆಡೆಗಳ ಮಾದರಿಯಂತೆ ಕೊಡಗಿನ ಜನರಿಗೆ ಇಂತಹ ‘ಕ್ರೇಜ್’ ಭಾರೀ ಕಡಿಮೆ. ಆದರೂ ಅದು ಹೇಗೋ ಬಟನ್ ಪ್ರೆಸ್ ಆಗಿ ಹೋಗುತ್ತದೋ ಅಥವಾ ಹೈಜಾಕ್ ಆಗುತ್ತಿದೆಯೋ ಗೊತ್ತಿಲ್ಲ. ಗ್ರಾಹಕರು ತಮಗೇ ಅರಿವಿಲ್ಲದಂತೆ ಹಣ ಕಳೆದುಕೊಳ್ಳುತ್ತಿದ್ದಾರೆ. ಗ್ರಾಹಕರು ಬಯಸದ ಕನಸ್ಸಿನಲ್ಲೂ ಬೇಕೆಂದು ಊಹಿಸದ ಹಲವಾರು ಪ್ಲಾನ್‍ಗಳು ಆ್ಯಕ್ಟಿವ್ ಆಗಿ ಬಿಟ್ಟಿರುತ್ತವೆ.

ರೀಚಾರ್ಜ್‍ಗೆಂದು ಕರೆನ್ಸಿ ಹಾಕಿದರೆ, ನಿಮ್ಮ ಪೊಲೋ ಪ್ಯಾಕ್ ಭವಿಷ್ಯವಾಣಿ, ಹಾಡು ಇತ್ಯಾದಿಗಳು ರಿನೀವ್ ಆಗಿದ್ದು, ಇಷ್ಟು ಹಣ ಕಟ್ಟಾಗಿದೆ ಎಂಬ ಮೆಸೇಜ್‍ನೊಂದಿಗೆ ಹಾಕಿದ್ದ ಕರೆನ್ಸಿಯಲ್ಲಿ ಇಂತಿಷ್ಟು ಕಟ್ ಆಗಿರುತ್ತದೆ. ಸೂಕ್ತ ಪರಿಜ್ಞಾನ ಹೊಂದಿರುವವರಿಗೇ ಇದು ಅರಿವಾಗುತ್ತಿಲ್ಲ. ಹೀಗಿರುವಾಗ ಜನಸಾಮಾನ್ಯರ ಪಾಡೇನು. ಹಣ ಕಳೆದುಕೊಂಡು ಇಂಗು ತಿಂದ ಮಂಗರಂತಾಗುವದಲ್ಲದೆ, ಯಾರಿಗೂ ಹೇಳಿಕೊಳ್ಳಲಾಗದ ಸ್ಥಿತಿ ಅವರದ್ದು. ಬಿಎಸ್‍ಎನ್‍ಎಲ್‍ನಲ್ಲಿ ಒಂದು ರೀತಿಯಾದರೆ, ಏರ್‍ಟೆಲ್, ಐಡಿಯಾ, ಜಿಯೋ, ರಿಲಯನ್ಸ್, ವೊಡಾಫೋನ್ ಇನ್ನಿತರ ಕಂಪೆನಿಗಳಲ್ಲಿ ಇದೇ ವಿಚಾರ ಬೇರೆ ಬೇರೆಯಾಗಿರುತ್ತದೆ. ಈ ಕುರಿತು ಮಡಿಕೇರಿಯ ನಿವಾಸಿ, ಪಳಂಗಪ್ಪ ಎಂಬವರು ತಮಗಾದ ಅನುಭವವನ್ನು ‘ಶಕ್ತಿ’ಯೊಂದಿಗೆ ಹಂಚಿಕೊಂಡಿದ್ದು, ಗ್ರಾಹಕರು ಜಾಗೃತರಾಗಬೇಕು. ಇದರೊಂದಿಗೆ ಮೊಬೈಲ್ ನೆಟ್‍ವರ್ಕ್‍ನ ವಿವಿಧ ಕಂಪೆನಿಗಳು ಸೂಕ್ತ ಮಾಹಿತಿ ಒದಗಿಸಿ ಮುಗ್ಧ ಗ್ರಾಹಕರಿಗೆ ಅನ್ಯಾಯವಾಗದಂತೆ ಕ್ರಮ ವಹಿಸಲು ಆಗ್ರಹಿಸಿದ್ದಾರೆ.

ಇವರ ಏರ್‍ಟೆಲ್ ನೆಟ್‍ವರ್ಕ್‍ನ ಮೊಬೈಲ್‍ಗೆ + 25729729714, + 2572971468 ಸಂಖ್ಯೆಯಿಂದ ಹಲವು ಬಾರಿ ಕರೆ ಬಂದಿದೆ. ಇದು ಎಲ್ಲಿಯ ನಂಬರ್ ಏನು ವಿಚಾರ ಎಂಬ ಗೊಂದಲದೊಂದಿಗೆ ಕರೆ ಸ್ವೀಕರಿಸಿದೊಡನೆ ಅವರ ಮೊಬೈಲ್‍ನ ಕರೆನ್ಸಿ ಹಣದಲ್ಲಿ ರೂ. 30 ರಿಂದ ರೂ. 50ರಷ್ಟು ಹಣ ಸೆಕೆಂಡ್‍ನಲ್ಲಿ ಮಂಗಮಾಯವಾಗಿದೆಯಲ್ಲದೆ ಕರೆ ಕಟ್ ಆಗಿರುತ್ತದೆ. ಹಿಂತಿರುಗಿ ಮಾಡಿದರೂ ಒಂದೋ ಹಣ ಕಟ್ ಅಥವಾ ಕರೆ ಸಿಗದು. ಇಂತಹ ನೂರಾರು ಪ್ರಕರಣಗಳು ಮೊಬೈಲ್ ಬಳಕೆದಾರರಿಗೆ ಅನುಭವಕ್ಕೆ ಬಂದಿದೆ. ಆದರೆ ಯಾರೂ ಏನೂ ಮಾಡಲಾಗದ ಪರಿಸ್ಥಿತಿ. ಇದಕ್ಕೆ ಸೂಕ್ತ ಕಡಿವಾಣ ಹೇಗೆ ಎಂಬದನ್ನು ಆಯಾಯ ಕಂಪೆನಿಗಳೇ ತಮ್ಮ ತಮ್ಮ ಗ್ರಾಹಕರಿಗೆ ಮಾಹಿತಿ ಒದಗಿಸಬೇಕಾಗಿದೆ. - ಶಶಿ