ಮಡಿಕೇರಿ, ಮೇ 31: ಸೆಸ್ಕಾಂ ಕಾರ್ಯವೈಖರಿ ಬಗ್ಗೆ ಮಡಿಕೇರಿ ತಾಲೂಕು ಪಂಚಾಯಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿಂದು ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ - ಸದಸ್ಯರಾದಿಯಾಗಿ ಸೆಸ್ಕಾಂ ವಿರುದ್ಧ ಹರಿಹಾಯ್ದರು.ಸದಸ್ಯೆ ಇಂದಿರಾ ಹರೀಶ್ ಮಾತನಾಡಿ, ದೊಡ್ಡ ಪುಲಿಕೋಟು ಗ್ರಾಮದಲ್ಲಿ ಹಲವಾರು ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿದೆ ಎಂದು ಕಳೆದ 3 ಸಭೆಗಳಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದ್ದೇನೆ. ಆದರೆ ಯಾವದೇ ಪ್ರಯೋಜನವಾಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಡಿಕೇರಿ ವಿಭಾಗದ ಎಇಇ ದೊಡ್ಡಮನಿಯವರು ಈ ವಾರದಲ್ಲಿ ಅದನ್ನು ತೆರವುಗೊಳಿಸಲಾಗುವದು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಹಾಗೂ ಸದಸ್ಯ ನಾಗೇಶ್ ಕುಂದಲ್ಪಾಡಿಯವರು ಮೂರು ಸಭೆಗಳಲ್ಲಿ ಪ್ರಸ್ತಾಪವಾದರೂ ಸಂಬಂಧಿಸಿದವರು ತಲೆಕೆಡಿಸಿ ಕೊಳ್ಳದಿರುವದು ಸರಿಯಲ್ಲ. ತಕ್ಷಣವೇ ಕಂಬಗಳನ್ನು ತೆರವುಗೊಳಿಸಲು ಸೂಚನೆ ನೀಡುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.

ಕೊಯನಾಡು- ಜೋಡುಪಾಲ ನಡುವೆಯೂ ಸುಮಾರು 7 ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿದೆ. ಪೆರಾಜೆ ಹಾಸ್ಟೆಲ್‍ನಲ್ಲಿ ವೋಲ್ಟೇಜ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಹೆಚ್ಚುವರಿ ಟಿಸಿ ಅಳವಡಿಸಲು ಮಂಜೂರಾಗಿ ದ್ದರೂ ಕೆಲಸ ಆಗಿಲ್ಲ ಎಂದು ನಾಗೇಶ್ ಕುಂದಲ್ಪಾಡಿ ಆರೋಪಿಸಿದರು. ಈ ಬಗ್ಗೆ ತನ್ನ ಗಮನಕ್ಕೆ ಬಂದಿಲ್ಲ. ಆ ಭಾಗದ ಅಧಿಕಾರಿಯಿಂದ ಮಾಹಿತಿ ಪಡೆದು ಕ್ರಮಕೈಗೊಳ್ಳುತ್ತೇನೆ ಎಂದು ಅಧಿಕಾರಿ ದೊಡ್ಡಮನಿ ಹೇಳಿದಾಗ, ಮಾಹಿತಿಯಿಲ್ಲದ ಮೇಲೆ ಸಭೆಗೆ ಏಕೆ ಬರುತ್ತೀರಾ ಎಂದು ಕುಂದಲ್ಪಾಡಿ ಪ್ರಶ್ನಿಸಿದರು.

(ಮೊದಲ ಪುಟದಿಂದ) ಕಾರುಗುಂದ ಗ್ರಾಮದಲ್ಲಿ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ವೋಲ್ಟೇಜ್ ಇರುವದೇ ಇಲ್ಲ. ಯುಪಿಎಸ್ ಇಲ್ಲವೆಂದರೆ ಸಂಪೂರ್ಣ ಕತ್ತಲಾವರಿಸುತ್ತದೆ ಎಂದು ಸದಸ್ಯ ಕೊಡಪಾಲು ಗಣಪತಿ ಪ್ರಸ್ತಾಪಿಸಿದರೆ, ಅರೆಕಾಡು ಗ್ರಾಮದಲ್ಲಿ ಜಗಜೀವನ ಕಾಲೋನಿಯಲ್ಲಿಯೂ ಸಂಜೆ ವೇಳೆ ವೋಲ್ಟೇಜ್ ಸಮಸ್ಯೆ ಆರಂಭವಾಗುತ್ತದೆ ಎಂದು ಸದಸ್ಯ ಅಪ್ರು ರವೀಂದ್ರ ಗಮನ ಸೆಳೆದರು. ತಾಳತ್ತಮನೆ- ಕಾರುಗುಂದ ನಡುವೆ ಕಾಡಿನ ಮಧ್ಯೆ ಮೇನ್‍ಲೈನ್ ಹಾದುಹೋಗಿದ್ದು, ಸೆಸ್ಕಾಂನಿಂದ ಕಾಡು ಕಡಿಯುವ ಕೆಲಸವಾಗದ ಕಾರಣ ಆಗಿಂದಾಗ್ಗೆ ವಿದ್ಯುತ್ ಅಡಚಣೆ ಎದುರಾಗುತ್ತದೆ ಎಂದು ಸದಸ್ಯ ಶ್ರೀಧರ್ ಹೇಳಿದರು.

ಶುಕ್ರವಾರ ಮಾಹಿತಿ ಕೊಡಿ

ಸೆಸ್ಕಾಂ ವಿರುದ್ಧ ಸದಸ್ಯರು ದೂರುಗಳನ್ನು ಮುಂದಿಟ್ಟ ಬಳಿಕ ಮಾತನಾಡಿದ ಅಧ್ಯಕ್ಷೆ ಶೋಭಾ ಮೋಹನ್, ಸದಸ್ಯರು ನೀಡಿರುವ ದೂರಿಗೆ ಸಂಬಂಧಿಸಿದಂತೆ ಕೆಲಸದ ಪ್ರಗತಿ ವಿವರದೊಂದಿಗೆ ತಾ. 2ರಂದು ತನ್ನನ್ನು ಭೇಟಿ ಮಾಡಿ ಮಾಹಿತಿ ಒದಗಿಸಿಕೊಡುವಂತೆ ಎಇಇಗೆ ಸೂಚಿಸಿದರು. ಸದಸ್ಯರುಗಳು ದೂರು ಹೇಳುತ್ತಿದ್ದ ವೇಳೆ ಪ್ರತಿಕ್ರಿಯಿಸುತ್ತಿದ್ದ ದೊಡ್ಡಮನಿಯವರು ಮಡಿಕೇರಿ ವಿಭಾಗದಲ್ಲಿ ಲೈನ್‍ಮೆನ್‍ಗಳ ಕೊರತೆಯಿದೆ. ಹೆಚ್ಚುವರಿ ಕೆಲಸ ವಹಿಸಿದರೆ, ಯಾರೂ ಕೂಡ ಒಪ್ಪಿಕೊಳ್ಳುವದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಯಾರೂ ಹೆಚ್ಚುವರಿ ಕೆಲಸ ವಹಿಸಿಕೊಳ್ಳಲು ಸಿದ್ಧರಿಲ್ಲವೋ ಅಂತವರನ್ನು ಮನೆಗೆ ಕಳುಹಿಸಿ, ನಿಮಗೆ ಸಿಬ್ಬಂದಿಯನ್ನು ನಿಯಂತ್ರಿಸಲಾಗದಿದ್ದರೆ ರಜೆ ಹಾಕಿ ಹೋಗಿ ಎಂದು ನಾಗೇಶ್ ಕುಂದಲ್ಪಾಡಿ ಆಕ್ರೋಷ ವ್ಯಕ್ತಪಡಿಸಿದರು.

ಮೂರ್ನಾಡು ಭಾಗದಲ್ಲಿನ ವಿದ್ಯುತ್ ಸಮಸ್ಯೆಯ ಬಗ್ಗೆ ದೂರು ನೀಡಲು ಕರೆ ಮಾಡಿದರೆ ಅಲ್ಲಿನ ಜೆಇ ನನ್ನ ದೂರವಾಣಿ ಕರೆಯನ್ನು ಸ್ವೀಕರಿಸುವದೇ ಇಲ್ಲ. ತನ್ನ ಸ್ಥಾನಕ್ಕೆ ಬೆಲೆ ಇಲ್ಲವೇ ಎಂದು ಎಇಇಯನ್ನು ಪ್ರಶ್ನಿಸಿದ ಅಧ್ಯಕ್ಷೆ ಶೋಭಾ ಮೋಹನ್ ಈ ಎಲ್ಲದರ ಬಗ್ಗೆ ನನಗೆ ತಾ. 2ರಂದು ಸ್ಪಷ್ಟ ವಿವರಣೆ ಬೇಕು. ಇಲ್ಲವಾದರೆ ನಾನು ಮಾತನಾಡುವ ರೀತಿಯೇ ಬೇರೆ ಎಂದು ಎಚ್ಚರಿಕೆಯಿತ್ತರು.

ವೈದ್ಯರ ಕೊರತೆ

ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ. ನಾಪೋಕ್ಲು ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಇನ್ನು ಕೆಲವೆಡೆ ಎಂಬಿಬಿಎಸ್ ವೈದ್ಯರ ಬದಲಾಗಿ ಆಯುಷ್ ವೈದ್ಯರಿಗೆ ತರಬೇತಿ ನೀಡಿ ನೇಮಕ ಮಾಡಲಾಗಿದೆ. ಎಷ್ಟೇ ಆಹ್ವಾನ ನೀಡಿದರೂ ಕೊಡಗಿಗೆ ವೈದ್ಯರು ಬರುವದಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಈ ಬಗ್ಗೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಿಗೆ ಪತ್ರ ಬರೆಯಲು ಸಭೆ ತೀರ್ಮಾನಿಸಿತು. ಮಡಿಕೇರಿ ವಿಭಾಗದಲ್ಲಿ ಜಾಂಡೀಸ್ ಕಾಣಿಸಿಕೊಂಡಿರುವ ಬಗ್ಗೆ ಸರ್ವೆ ಮಾಡಲಾಗಿದ್ದು, 40 ಪ್ರಕರಣಗಳು ಪತ್ತೆಯಾಗಿವೆ. ಜಾಂಡೀಸ್ ಕಾಣಿಸಿಕೊಳ್ಳಲು ಕಾರಣವೇನು ಎಂಬದರ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿಯಿತ್ತರು.

ತೋಟಗಾರಿಕಾ ಇಲಾಖಾಧಿಕಾರಿ ಪ್ರಮೋದ್, ಹನಿ ನೀರಾವರಿಗೆ ಕಾಫಿ ಹೊರತುಪಡಿಸಿ ಉಳಿದ ಬೆಳೆಗಳಿಗೆ ಶೇ. 90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ತೋಟಗಾರಿಕಾ ಬೆಳೆಗಳ ಸಂಸ್ಕರಣೆಗೆ ಶೇ. 40 ಸಬ್ಸಿಡಿಯಿದೆ ಎಂದು ಮಾಹಿತಿಯಿತ್ತರು. ಕೃಷಿ ಅಧಿಕಾರಿ ಗಿರೀಶ್, ಬಿತ್ತನೆ ಬೀಜ ಜೂನ್ ಮೊದಲ ವಾರದಲ್ಲಿ ತಾಲೂಕಿನ 4 ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ ಗಿರಿಜನ ಉಪಯೋಜನೆಯಡಿ ಫಲಾನುಭವಿ ಗಳಿಗೆ ಸ್ಟೌವ್ ಮತ್ತು ಕುಕ್ಕರ್ ವಿತರಿಸಲಾಯಿತು. ಮೀನುಗಾರಿಕಾ ಇಲಾಖೆಯಿಂದ ಬಲೆ ಹಾಗೂ ಪರಿಕರಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಇಓ ಜೀವನ್ ಕುಮಾರ್, ಉಪಾಧ್ಯಕ್ಷ ಸಂತು ಸುಬ್ರಮಣಿ, ಸದಸ್ಯರು, ಅಧಿಕಾರಿಗಳು ಹಾಜರಿದ್ದರು.