*ಗೋಣಿಕೊಪ್ಪಲು, ಮೇ 30: ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಗಳ ಅಂಗಡಿ ಮಳಿಗೆಗಳಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಗೋಣಿಕೊಪ್ಪಲು ಪೊಲೀಸರು ಬಂದಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.ತುಮಕೂರು ಜಿಲ್ಲೆಯ ಗೊಲ್ಲರಹಟ್ಟಿ ಗ್ರಾಮದ ಆರ್. ಸತೀಶ್ (ಚಾಲಾಕಿ ರಂಗ), ವಿಜಯಪುರ ಜಿಲ್ಲೆಯ ಹುಲ್ಲೂರು ಗ್ರಾಮದ ಪ್ರಕಾಶ್ ಸಿದ್ದಪ್ಪ ತಳವಾರ್, ಕೊಡಗು ಜಿಲ್ಲೆ ಕೋಕೇರಿ ಗ್ರಾಮದ ಎಸ್, ಮುತ್ತಪ್ಪ ಬಂಧಿತ ಆರೋಪಿಗಳು.ಆರೋಪಿಗಳು ಮಡಿಕೇರಿ, ಮೂರ್ನಾಡು, ನಾಪೋಕ್ಲು, ಗೋಣಿಕೊಪ್ಪಲು, ತಿತಿಮತಿ, ಕುಶಾಲನಗರ, ಸಿದ್ದಾಪುರ, ನೆಲ್ಲಿಹುದಿಕೇರಿ, ಪೊನ್ನಂಪೇಟೆ ಸೇರಿದಂತೆ ಜಿಲ್ಲೆಯ 22 ವಾಣಿಜ್ಯ ಮಳಿಗೆಗಳಲ್ಲಿ ಕಳವು ಮಾಡಿರುವ ಆರೋಪ ಹೊತ್ತಿದ್ದಾರೆ.
ಕಳೆದ 19ರಂದು ಆರೋಪಿಗಳು ಸಿದ್ದಾಪುರದ ವಿವಿಧ ಅಂಗಡಿ ಮಳಿಗೆಗಳಲ್ಲಿ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಡಿವೈಎಸ್ಪಿ ನಾಗಪ್ಪ ಅವರ ಮಾರ್ಗದರ್ಶನÀದಲ್ಲಿ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಪಿ.ಕೆ. ರಾಜು ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಆರೋಪಿಗಳ ಸೆರೆಗೆ ಬಲೆ ಬೀಸಿದ್ದರು.
ಭಾನುವಾರ ಸಂಜೆ ಗೋಣಿಕೊಪ್ಪಲಿನ ಚೆನ್ನಂಗೊಲ್ಲಿಯ ಬಸ್ ತಂಗುದಾಣದಲ್ಲಿ ನಿಂತಿದ್ದ ಆರೋಪಿಗಳನ್ನು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರ ಬಂದಿತು ಎಂದು ಸಿಪಿಐ ರಾಜು ತಿಳಿಸಿದರು. ಬಂಧಿತರಿಂದ ರೂ. 112900 ನಗದು, ರೂ. 17300 ಮೌಲ್ಯದ ಸಿಗರೇಟು, ರೂ. 40 ಸಾವಿರ
(ಮೊದಲ ಪುಟದಿಂದ) ಬೆಲೆಬಾಳುವ ಹೀರೋ ಹೋಂಡ ಸ್ಲ್ಪೆಂಡರ್ ಬೈಕ್, ರೂ. 25 ಸಾವಿರ ಮೌಲ್ಯದ ಟಿವಿಎಸ್ ಸ್ಟಾರ್ ಸಿಟಿ ಬೈಕ್, 3 ಮೊಬೈಲ್ ಹೀಗೆ ಒಟ್ಟು ರೂ. 2 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜು ತಿಳಿಸಿದರು.
ಚಾಲಾಕಿ ರಂಗ ಹಾಗೂ ಪ್ರಕಾಶ್ ಸಿದ್ದಪ್ಪ ತಳವಾರ್ 2015ರಲ್ಲಿ ಹುಣಸೂರು, ಬಿಳಿಕೆರೆ, ಭೇರ್ಯ ಮೊದಲಾದ ಕಡೆ ಕಳ್ಳತನ ಮಾಡಿ ಕೆ.ಆರ್. ನಗರದ ಕಾರಾಗೃಹದಲ್ಲಿ ಜೈಲು ವಾಸ ಅನುಭವಿಸಿದ್ದರು. 2016 ಅಕ್ಟೋಬರ್ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬೆಂಗಳೂರಿನ ಹೊಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು.
ಸಿ.ಎಸ್. ಮುತ್ತಪ್ಪ ನನ್ನು ಬೆಂಗಳೂರಿನಲ್ಲಿ ಪರಿಚಯ ಮಾಡಿಕೊಂಡು ಆತನನ್ನು ತಮ್ಮ ಗುಂಪಿಗೆ ಸೇರಿಸಿಕೊಂಡಿದ್ದರು. ಮದ್ಯಪಾನ, ಲೈವ್ಬ್ಯಾಂಡ್, ಗಾಂಜಾ ಸೇವನೆ ಮೊದಲಾದ ದುಶ್ಚಟಗಳನ್ನು ರೂಢಿಸಿಕೊಂಡಿದ್ದ ಆರೋಪಿಗಳು ಈಚೆಗೆ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ಬೆಟ್ಡದ ಜಾತ್ರೆಯಲ್ಲಿ ಕೆಎ 09-ಇಬಿ3566 ಸಂಖ್ಯೆಯ ಹೀರೊ ಹೋಂಡ ಬೈಕ್ ಕಳವು ಮಾಡಿ ಅದರಲ್ಲಿ ಸುತ್ತಾಡುತ್ತಿದ್ದರು ಎಂದು ತಿಳಿಸಿದರು.
ಆರೋಪಿಗಳು ವಾಣಿಜ್ಯ ಮಳಿಗೆಗಳ ಶೆÉಟ್ಟರ್ ಮುರಿದು ಒಳನುಗ್ಗಿ ಕ್ಯಾಷ್ ಕೌಂಟರ್ನಲ್ಲಿ ಇಡುತ್ತಿದ್ದ ಹಣ ಹಾಗೂ ಇತರ ಸಾಮಾನುಗಳನ್ನು ದೋಚುತ್ತಿದ್ದರು. ಕಳೆದ ಏ.20 ರಂದು ಮೂರ್ನಾಡಿನ ಬ್ಲೂಬೆಲ್ ರೆಡಿಮೇಡ್ ಅಂಗಡಿ, ನಾಣೂಸ್ ಬೇಕರಿ, ಸೌಭಾಗ್ಯ ಮೆಡಿಕಲ್ ಶಾಪ್, ತಾ. 11ರಂದು ನಾಪೋಕ್ಲು, ಕಕ್ಕಬೆಯ ಮಾರುತ್ ಆಗ್ರೋ ಸೆಂಟರ್, ಅನನ್ಯ ಎಂಟರ್ ಪ್ರೈಸಸ್, ಮಂಜುನಾಥ್ ಸ್ಟೋರ್, ಸಿಎಸ್ಎಂ ಅಂಗಡಿ, ಅಂದಾಯಿ ಅಂಗಡಿ, ಎಂಎಸ್ಐಎಲ್ ವೈನ್ ಶಾಪ್, 12ರಂದು ಪೊನ್ನಂಪೇಟೆ, ತಿತಿಮತಿ, ಗೋಣಿಕೊಪ್ಪಲಿನ ಗ್ರೀನ್ ಲ್ಯಾಂಡ್ ಅಂಗಡಿ, ಪ್ಯಾಷನ್ ಬಾಕ್ಸ್, ನಿಧಿ ಸೂಪರ್ ಮಾರ್ಕೆಟ್, ಕಾಂಚನ ಮೆಡಿಕಲ್ಸ್. 13ರಂದು ಮಡಿಕೇರಿಯ ಕೆಪಿಎಂ ಪ್ರಾವಿಷನ್ ಸ್ಟೋರ್, 18ರಂದು ಕುಶಾಲನಗರದ ಕೊಡಗು ಆಗ್ರೋ ಸೆಂಟರ್, 19ರಂದು ಸಿದ್ದಾಪುರ, ನೆಲ್ಲಿಹುದಿಕೇರಿಯ ಜನತಾ ಸ್ಟೋರ್,ನಾಯ್ಡು ಬ್ರಾಂದಿ ಶಾಪ್,ನವರತ್ನ ಜ್ಯುವೆಲ್ಲರಿ, ಬಿಸ್ಮಿ ಸ್ಟೇಷನರಿ ಅಂಗಡಿ, ಬ್ರಿದಿ ಮೆಡಿಕಲ್ ಶಾಪ್, ನ್ಯಾಷನಲ್ ವೈನ್ಸ್, ಬ್ಲಾಕ್ ಪೆಪ್ಪರ್ ಸೂಪರ್ ಮಾರ್ಕೆಟ್ಗಳಲ್ಲಿ ಕಳ್ಳತನ ಮಾಡಿದ್ದರು ಎಂದು ರಾಜು ತಿಳಿಸಿದರು.
ಕಾರ್ಯಾಚರಣೆ ತಂಡದಲ್ಲಿ ಗೋಣಿಕೊಪ್ಪಲು ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಎಚ್.ವೈ. ರಾಜು, ಪೊನ್ನಂಪೇಟೆ ಸಬ್ಇನ್ಸ್ಪೆಕ್ಟರ್ ಜಯರಾಮ್, ಸಿಬ್ಬಂದಿಗಳಾದ ಎಚ್.ಕೆ. ಕೃಷ್ಣ, ಕೆ.ಕೆ. ಕುಶಾಲಪ್ಪ, ಮಹಮದ್ ಆಲಿ, ಅಬ್ದುಲ್ ಮಜೀದ್, ಕೆ.ಎ.ನಾಣಯ್ಯ, ಕುಮಾರ್, ಮನು, ಸುಬ್ರಮಣಿ, ಮೋಹನ, ಹರೀಶ್, ಸಿಗಂಧ, ಕೃಷ್ಣ ಮೂರ್ತಿ, ಶೋಭ, ಕೃಷ್ಣಪ್ಪ, ಮಹೇಶ್, ರಾಜೇಶ್ ಪಾಲ್ಗೊಂಡಿದ್ದರು,
ಎನ್.ಎನ್. ದಿನೇಶ್