ಮಡಿಕೇರಿ, ಮೇ 31: ಜಿಲ್ಲೆಯ ವಿವಿಧೆಡೆ ಇರುವ ಎಂಟು ಸರಕಾರಿ ವಸತಿ ಶಾಲೆಗಳಿಗೆ, ಇಂದು ಆರನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ವಿದ್ಯಾರ್ಥಿಗಳ ಪ್ರತಿಭೆ ಅನುಸಾರ ಜರುಗಿದ ಆಯ್ಕೆ ಪ್ರಕ್ರಿಯೆ ಸಂದರ್ಭ 750ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಸಂದರ್ಶನಕ್ಕೆ ಆಗಮಿಸಿದ್ದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ಸರಕಾರದ ಉಚಿತ ಶಿಕ್ಷಣ ವ್ಯವಸ್ಥೆಯಡಿ ವಸತಿ ಶಾಲೆಗಳಿಗೆ ಈ ಆಯ್ಕೆ ನಡೆಸಲಾಯಿತು.
ಜಿಲ್ಲೆಯ ಬಾಳುಗೋಡು ವಿನಲ್ಲಿರುವ ಏಕಲವ್ಯ ಸರಕಾರಿ ವಸತಿ ಶಾಲೆಗೆ ಆರರಿಂದ 10ನೇ ತರಗತಿವರೆಗಿನ 60 ವಿದ್ಯಾರ್ಥಿಗಳನ್ನು ಒಳಗೊಂಡಂತೆ, ಇನ್ನುಳಿದ 7 ವಸತಿ ಶಾಲೆಗಳಿಗೆ ಮೀಸಲಾತಿ ನಿಯೋಜನೆ ಅನುಸಾರ ತಲಾ 50 ವಿದ್ಯಾರ್ಥಿಗಳ ನಿಯುಕ್ತಿಗಾಗಿ ಪಾರದರ್ಶಕ ಸಂದರ್ಶನ ಏರ್ಪಡಿಸಲಾಗಿತ್ತು.
ತಿತಿಮತಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಸವನ ಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆಲೂರು ಸಿದ್ದಾಪುರ ಹಾಗೂ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಸೋಮವಾರಪೇಟೆ ಮತ್ತು ನಾಪೋಕ್ಲುವಿನ ಡಾ|| ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳು ಮತ್ತು ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ಸರಕಾರಿ ವಸತಿ ಶಾಲೆಗಳಿಗೆ ತಲಾ 50 ವಿದ್ಯಾರ್ಥಿಗಳನ್ನು ಸಂದರ್ಶನದಲ್ಲಿ ಆರಿಸಲಾಯಿತು.
ಒಟ್ಟು 750ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಇಲ್ಲಿ ವಿದ್ಯಾರ್ಥಿಗಳ ಸಾಮಥ್ರ್ಯ ಅನುಸಾರ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಇಲಾಖೆಯ ಜಂಟಿ ಆಶ್ರಯದಲ್ಲಿ ಸರಕಾರದ ಮೀಸಲಾತಿ ಅನುಸಾರ ವಿದ್ಯಾರ್ಥಿಗಳನ್ನು ಉಚಿತ ಪ್ರವೇಶದೊಂದಿಗೆ ನೇಮಿಸಿ ಕೊಳ್ಳಲಾಯಿತು.
ಜೂನ್ ಎರಡನೆಯ ವಾರದಿಂದ ಈ ಎಲ್ಲಾ ವಸತಿ ಶಾಲೆಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ರಮದೊಂದಿಗೆ ತರಗತಿಗಳು ಆರಂಭ ಗೊಳ್ಳಲಿರುವದಾಗಿ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.