ಮಡಿಕೇರಿ, ಮೇ 30: ರೈತರ ಕಡತ ವಿಲೇವಾರಿಯಲ್ಲಿ ಕಂದಾಯ ಇಲಾಖೆ ನಿಧಾನಗತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ ಮತ್ತು ರೈತರ ಅನೇಕ ಕಡತಗಳು ನಾಪತ್ತೆಯಾಗಿವೆ ಎಂದು ಆರೋಪಿಸಿ ಸೇವ್ ಕೊಡಗು ಹಾಗೂ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಜಿಲ್ಲಾಧಿಕಾರಿಗಳೊಂದಿಗೆ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಲಾಯಿತು.ಕಂದಾಯ ಇಲಾಖೆಯಲ್ಲಿ ನಿಧಾನಗತಿಯ ಕಡತ ವಿಲೇವಾರಿ ಹಾಗೂ ಕಡತಗಳ ನಾಪತ್ತೆ ಬಗ್ಗೆ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ (ಆಡಳಿತ), ಪ್ರಾದೇಶಿಕ ಆಯುಕ್ತರಿಗೆ, ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಅಧೀನ ಕಾರ್ಯದರ್ಶಿಗಳು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಕೋರಿದ್ದರೂ, ಅರ್ಜಿದಾರರನ್ನು ಜಿಲ್ಲಾಧಿಕಾರಿಗಳು ಇದುವರೆಗೂ ಕರೆದು ಚರ್ಚಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿದ ಸೇವ್ ಕೊಡಗು ಹಾಗೂ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಮುಖಂಡರಾದ ಬಿ.ಟಿ. ದಿನೇಶ್ ಮತ್ತು ಬಿ.ಎಂ. ಜಿನ್ನು ನಾಣಯ್ಯ ಹಾಗೂ ಇತರರು ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿಗಳಿಗೆ ಹಣ ಕೊಟ್ಟಲ್ಲಿ ಮಾತ್ರ ಕಡತ ವಿಲೇವಾರಿ ಸೇರಿದಂತೆ ಸರ್ಕಾರದ ಕೆಲಸ ಆಗುತ್ತಿದೆ. ಬಡವರನ್ನು ಅಧಿಕಾರಿಗಳು ವೃಥಾ ಅಲೆದಾಡಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಕೈಗೊಂಡಿದ್ದು, ಸ್ವಚ್ಛತೆಗೆ ಎಷ್ಟು ಆದ್ಯತೆ ನೀಡಲಾಗಿದೆಯೇ ಅದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರವನ್ನು ತೊಡೆದು ಹಾಕಲು ಆದ್ಯತೆ ನೀಡಬೇಕಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭ್ರಷ್ಟಚಾರಕ್ಕೆ ಕಾರಣರಾಗಿದ್ದಾರೆ. ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳನ್ನು ಆಯಕಟ್ಟಿನ ಜಾಗದಲ್ಲಿ ರಾಜ್ಯ ಸರ್ಕಾರ ನೇಮಿಸಿಕೊಂಡಿದೆ ಎಂದು ಆರೋಪಿಸಿದ ಬಿ.ಟಿ. ದಿನೇಶ್ ಅವರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸಾಧ್ಯವಾಗದಿದ್ದರೆ ರಾಜಿನಾಮೆ ಕೊಟ್ಟು ತೆರಳಲಿ ಎಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಆಗ್ರಹಿಸಿದರು.
ಈ ಸಂದರ್ಭ ಅಲ್ಲಿಯೇ ಇದ್ದ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ತಾನು ಜೂನ್ 9 ಅಥವಾ 10 ರಂದು ಮತ್ತೆ ಜಿಲ್ಲೆಗೆ ಆಗಮಿಸಲಿದ್ದು, ಅಂದಿನವರೆಗೆ ತಾವು ನೀಡಿದ ಮನವಿಯ ಬಗ್ಗೆ ಪರಿಶೀಲಿಸಿ ಅಧ್ಯಯನ ನಡೆಸಲಿ. ಬಳಿಕ ತಾವು ಸೇರಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸೋಣ ಎಂದು ಭರವಸೆ ನೀಡಿದರು.