ಮಡಿಕೇರಿ, ಮೇ 31: ಗೋದಾಮಿನಲ್ಲಿ ದಾಸ್ತಾನಿರಿಸಿದ್ದ ಕರಿಮೆಣಸನ್ನು ಕಳವು ಮಾಡಿದ ಆರೋಪಿಗಳನ್ನು 24 ಗಂಟೆಗಳ ಅವಧಿಯಲ್ಲಿ ಬಂಧಿಸಿರುವ ಪೊಲೀಸರು, ಈ ಸಂಬಂಧ ಮಾಲು ಸಮೇತ ಕಳ್ಳತನಕ್ಕೆ ಬಳಸಿದ ವಾಹನ ಹಾಗೂ ಆರೋಪಿಗಳ ಚರಾಸ್ತಿಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.

ದಕ್ಷಿಣ ಕೊಡಗಿನ ಸುಳುಗೋಡು ಗ್ರಾಮದ ಕಳ್ಳಿಚಂಡ ಕೆ. ತಿಮ್ಮಯ್ಯ ಅವರಿಗೆ ಸೇರಿದ ಗೋದಾಮಿನಲ್ಲಿ ದಾಸ್ತಾನಿರಿಸಿದ್ದ ರೂ. 2.40 ಲಕ್ಷ ಬೆಲೆ ಬಾಳುವ 4 ಕ್ವಿಂಟಾಲ್ ಕರಿಮೆಣಸನ್ನು ನಿನ್ನೆ ಕಳ್ಳರು ದೋಚಿದ್ದರು. ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರ ತಂಡ ಸುಳುಗೋಡು ಗ್ರಾಮದ ಕೋಟೆಕೊಪ್ಪ ಕಾಲೋನಿ ನಿವಾಸಿ ಹೆಚ್.ಎ. ಸಂಜು (23) ಹಾಗೂ ಹೆಚ್.ಕೆ. ಕಾಮರಾಜ್ (48) ಎಂಬಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಳವಾದ ರೂ. 2 ಲಕ್ಷ ಮೌಲ್ಯದ 400 ಕೆ.ಜಿ. ಕರಿಮೆಣಸು, ಮೆಣಸು ಸಾಗಿಸಲು ಉಪಯೋಗಿಸಿದ ಆಟೋರಿಕ್ಷಾ, ಕಳ್ಳತನ ಮಾಡಿದ ಹಣದಿಂದ ಖರೀದಿಸಿದ ಬೈಕ್, ಟಿ.ವಿ. ಸೇರಿದಂತೆ ಒಟ್ಟು ರೂ. 5.5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ನಾಗಪ್ಪ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ. ರಾಜು, ಪೊನ್ನಂಪೇಟೆ ಠಾಣಾಧಿಕಾರಿ ಜಯರಾಮ್, ಸಿಬ್ಬಂದಿಗಳಾದ ಎಂ.ಡಿ. ಮನು, ಮಹಮ್ಮದ್ ಆಲಿ, ಎನ್.ಡಿ. ಸುಬ್ರಮಣಿ, ಅಬ್ದುಲ್ ಮಜೀದ್, ಹರೀಶ್, ಸುಗಂಧ, ಮೋಹನ್ ಪಾಲ್ಗೊಂಡಿದ್ದರು.