ಸೋಮವಾರಪೇಟೆ, ಮೇ 30: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನತೆಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಮೀಸಲಿಟ್ಟಿರುವ ನೀರಿನ ಟ್ಯಾಂಕ್ ಇದೀಗ ಖಾಸಗಿ ವ್ಯಕ್ತಿಯ ಕಾಫಿ ತೋಟಕ್ಕೆ ಸ್ಪ್ರೇ ಮಾಡಲು ಬಳಕೆಯಾಗುತ್ತಿದೆ.

ಅಗತ್ಯ ಸಂದರ್ಭದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಲು ಇರುವ ಟ್ರ್ಯಾಕ್ಟರ್ ಮತ್ತು ಟ್ಯಾಂಕ್‍ನಲ್ಲಿನ ನೀರನ್ನು ಕರ್ಕಳ್ಳಿ ಗ್ರಾಮದ ದೊರೆ ಎಂಬವರ ಕಾಫಿ ತೋಟದ ಕೆಲಸಕ್ಕೆ ಬಳಸಿಕೊಂಡಿರುವ ಬಗ್ಗೆ ವೆಂಕಟೇಶ್ವರ ಬ್ಲಾಕಿನ ಮಾರಿಯಮ್ಮ ಮಿತ್ರ ಮಂಡಳಿ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ಕಳ್ಳಿ ಬಾಣೆಯಲ್ಲಿರುವ ಗ್ರಾಮದೇವತೆ ಪೂಜೆಗಾಗಿ ಮಿತ್ರ ಮಂಡಳಿ ಪದಾಧಿಕಾರಿಗಳು ನೀರಿನ ಟ್ಯಾಂಕರ್ ಬೇಕೆಂದು ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ನೀರಿಗಾಗಿ ಮಧ್ಯಾಹ್ನದವರಗೂ ಕಾಯ್ದು ಸುಸ್ತಾದ ಪದಾಧಿಕಾರಿಗಳು ಬೇರೆಡೆಯಿಂದ ಕುಡಿಯುವ ನೀರನ್ನು ತರಿಸಿಕೊಂಡಿದ್ದಾರೆ. ನಂತರ ಪಂಚಾಯಿತಿ ನೀರಿನ ಟ್ಯಾಂಕರ್ ಅನ್ನು ಹುಡುಕಿದಾಗ ಖಾಸಗಿ ವ್ಯಕ್ತಿಯ ತೋಟಕ್ಕೆ ನೀರು ಸರಬರಾಜು ಮಾಡುತ್ತಿರುವದು ಕಂಡುಬಂದಿದೆ.

ಈ ಬಗ್ಗೆ ಆಕ್ರೋಶಿತರಾದ ಮಿತ್ರ ಮಂಡಳಿ ಪದಾಧಿಕಾರಿಗಳಾದ ಅನಿಲ್, ಸಂದೀಪ್, ಪ್ರಸಾದ್, ಶ್ರೀಕಾಂತ್, ಲೋಕೇಶ್, ನಾಗರಾಜ್, ಮನು, ಸಂದೇಶ್ ಅವರುಗಳು ಪಂಚಾಯಿತಿಗೆ ತೆರಳಿ ಮುಖ್ಯಾಧಿಕಾರಿಗೆ ದೂರು ಸಲ್ಲಿಸಿದ್ದು, ಪಂಚಾಯಿತಿಯ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.