ಮಡಿಕೇರಿ, ಮೇ 30: ಕೊಲೆ ಮಾಡಲು ಯತ್ನಿಸಿದ ಆರೋಪಿಗೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಸಾರಾಂಶ: ದಿನಾಂಕ 9.9.2013 ರಂದು ರಾತ್ರಿ 10.30 ಗಂಟೆಗೆ ಕುಶಾಲನಗರ ಪೊಲೀಸ್ ಠಾಣಾ ಸರಹದ್ದಿನ ಕುಶಾಲನಗರ ಪಟ್ಟಣದಲ್ಲಿರುವ ಕುಶಾಲ್ ಬಾರ್‍ಗೆ ಕೂಲಿ ಕೆಲಸ ಮಾಡುತ್ತಿರುವ ಬೈಚನಹಳ್ಳಿ ನಿವಾಸಿ ಪಾಂಡ್ಯನ್ ಆರ್. ಎಂಬವರು ಮದ್ಯ ಸೇವನೆ ಮಾಡಲು ಹೋಗಿದ್ದಾಗ ಅದೇ ಬಾರ್‍ನಲ್ಲಿದ್ದ ಬೈಚನಹಳ್ಳಿ ಗ್ರಾಮದ ರಾಜಾಚಾರಿ ಎಂಬವರು ಪುತ್ರ ಆರೋಪಿ ಮಹೇಶ್‍ನನ್ನು ಪಾಂಡ್ಯನ್ ಒಳ್ಳೆಯ ರೀತಿಯಲ್ಲಿ ಮಾತನಾಡಿಸಿದ್ದು, ಆಗ ಆರೋಪಿಯು ಪಾಂಡ್ಯನ್‍ನನ್ನು ಕುರಿತು ತಾನು ಬೈಚನಹಳ್ಳಿಯ ಡಾನ್ ಕಣೋ, ನನ್ನನ್ನು ಅಣ್ಣ ಎಂದು ಕರೆಯೋ ಎಂದು ಅವಾಚ್ಯ ಶಬ್ಧಗಳಿಂದ ಬೈದಾಗ ಪಾಂಡ್ಯನ್ ಏಕೆ ತನಗೆ ಬೈಯುತ್ತಿದ್ದೀಯಾ? ಎಂದು ಕೇಳಿದಾಗ ಆರೋಪಿ ನನಗೆ ತಿರುಗಿ ಮಾತನಾಡುತ್ತೀಯಾ? ಎಂದು ಕುಶಾಲ್ ಬಾರ್ ಮತ್ತು ರೆಸ್ಟೋರೆಂಟ್‍ಗೆ ಹೋಗುವ ಪ್ಯಾಸೆಜ್‍ನಲ್ಲಿ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಪಾಂಡ್ಯನ್‍ನ ಬಲ ಕಂಕುಳಿಗೆ ಹಾಗೂ ಎದೆಯ ಬಲಭಾಗಕ್ಕೆ 4-5 ಬಾರಿ ಚೂರಿಯಿಂದ ಇರಿದು ತೀವ್ರ ಸ್ವರೂಪದ ಗಾಯಪಡಿಸಿರುವದಾಗಿ ಕುಶಾಲನಗರ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಕುಶಾಲನಗರ ಠಾಣಾ ಪೊಲೀಸರು ತನಿಖೆಯನ್ನು ನಡೆಸಿ ಆರೋಪಿಯ ವಿರುದ್ಧ ಫಿರ್ಯಾದು ದಾರನನ್ನು ಕೊಲೆ ಮಾಡಲು ಯತ್ನಿಸಿದ ಅಪರಾಧಕ್ಕಾಗಿ ದೋಷಾ ರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಮಡಿಕೇರಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ನಡೆಸಿದ್ದು, ಸಾಕ್ಷಿಗಳ ವಿಚಾರಣೆಯಿಂದ ಆರೋಪಿ ಪಾಂಡ್ಯನ್‍ನನ್ನು ಕೊಲೆ ಮಾಡಲು ಯತ್ನಿಸಿರುವದು ಸಾಬೀತಾಗಿದೆ ಎಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸದರಿ ತೀರ್ಪಿನಲ್ಲಿ ಆರೋಪಿಗೆ 6 ವರ್ಷಗಳ ಕಠಿಣ ಸಜೆ ಮತ್ತು ರೂ. 20 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ವಸೂಲಾತಿಯಾಗುವ ದಂಡದ ಹಣದಲ್ಲಿ ರೂ. 15 ಸಾವಿರವನ್ನು ಗಾಯಾಳು ಪಾಂಡ್ಯನ್‍ಗೆ ಪರಿಹಾರವಾಗಿ ನೀಡಲು ತಿಳಿಸಲಾಗಿದೆ. ಈ ಪ್ರಕರಣದ ವಾದವನ್ನು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ಮಂಡಿಸಿದ್ದರು.