ಸುಂಟಿಕೊಪ್ಪ, ಮೇ 30: ಇಲ್ಲಿನ ಬ್ಲೂ ಬಾಯ್ಸ್ ಯೂತ್‍ಕ್ಲಬ್ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವದ ಅಂಗವಾಗಿ ಮತ್ತು ಡಿ. ಶಿವಪ್ಪ ಅವರ ಜ್ಞಾಪಕಾರ್ಥವಾಗಿ ಆಯೋಜಿಸಿದ್ದ 22ನೇ ವರ್ಷದ ರಾಜ್ಯಮಟ್ಟದ ‘ಗೋಲ್ಡ್ ಕಪ್’ ಫುಟ್‍ಬಾಲ್ ಟೂರ್ನಿಯ ಸಮಾರೋಪ ಸಮಾರಂಭವನ್ನು ಮಾಜಿ ಶಾಸಕ ಕೆ. ಎಂ. ಇಬ್ರಾಹಿಂ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಫುಟ್‍ಬಾಲ್ ಕ್ರೀಡೆಗೆ ಕೊಡಗಿನಲ್ಲಿಯೇ ಸುಂಟಿಕೊಪ್ಪ ಹೆಸರುವಾಸಿಯಾಗಿದ್ದು ಇದನ್ನು ಉಳಿಸಿ ಕ್ರೀಡೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಬಿ. ಭಾರತೀಶ್ ಮಾತನಾಡಿ, ಬ್ಲೂ ಬಾಯ್ಸ್ ಸಂಘಕ್ಕೆ ಸ್ವಂತ ಕಟ್ಟಡ ಇಲ್ಲದೇ ಇರುವದರಿಂದ ಅವರ ಕಾರ್ಯ ಚಟುವಟಿಕೆ ಕಷ್ಟಕರವಾಗಿದೆ. ಆ ನಿಟ್ಟಿನಲ್ಲಿ ಗ್ರಾ.ಪಂ. ಮತ್ತು ಜಿ.ಪಂ. ಇದರ ಈ ಬಗ್ಗೆ ಆಸಕ್ತಿ ವಹಿಸಿ ಜಾಗ ನೀಡಿದರೆ ಕಟ್ಟಡ ಕಟ್ಟುವದಕ್ಕೆ ಅನುದಾನವನ್ನು ಒದಗಿಸುವದಾಗಿ ಭರವಸೆ ನೀಡಿದರು.

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಜಿ. ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯದ ಅಧ್ಯಕ್ಷ ಎ. ಲೋಕೇಶ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಸದಸ್ಯ ಓಡಿಯಪ್ಪನ ವಿಮಲಾವತಿ, ಪನ್ಯ ತೋಟದ ಮಾಲೀಕ ಅಖಿಲೇಶ್ ಬಸಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷ ಎಂ.ಎ. ಉಸ್ಮಾನ್, ವರ್ಕ್‍ಶಾಪ್ ಸಂಘದ ಅಧ್ಯಕ್ಷ ವಿ.ಎ. ಸಂತೋಷ್, ನಗರ ಕಾಂಗ್ರೆಸ್ ಮುಖಂಡ ಕೆ.ಇ. ರಫೀಕ್, ಹಿರಿಯ ಪತ್ರಕರ್ತ ಬಿ.ಸಿ. ದಿನೇಶ್, ಬ್ಲೂ ಬಾಯ್ಸ್ ಸಂಘದ ಅಧ್ಯಕ್ಷ ಮೋನಪ್ಪ ಪೂಜಾರಿ ಇತರರು ಇದ್ದರು.