ಸೋಮವಾರಪೇಟೆ, ಮೇ 30: ವಿಧಾನಸಭಾ ಚುನಾವಣೆಗೆ 6 ತಿಂಗಳು ಇರುವಂತೆಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಘೋಷಿಸಬೇಕು. ಮಡಿಕೇರಿ ಕ್ಷೇತ್ರದಲ್ಲಿ ಹೊರಗಿನಿಂದ ಬರುವವರಿಗೆ ಟಿಕೆಟ್ ನೀಡಬಾರದು. ಕಾರ್ಯಕರ್ತರು ಕೇಳುವ ಕೆಲಸ ಕಾರ್ಯಗಳನ್ನು ಜನಪ್ರತಿನಿಧಿಗಳು ಶೀಘ್ರ ಮಾಡಿಕೊಡಬೇಕು. ರಸ್ತೆ, ಕುಡಿಯುವ ನೀರಿನ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಮುಖಂಡರು ಗಳನ್ನು ಆಗ್ರಹಿಸಿದರು.
ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಈ ಮೇಲಿನ ಅಭಿಪ್ರಾಯಗಳು ಕೇಳಿಬಂದವು.
ಮುಖಂಡರುಗಳ ಭಾಷಣದ ನಂತರ ಮಾತನಾಡಲು ಅವಕಾಶ ಗಿಟ್ಟಿಸಿಕೊಂಡ ಕಾರ್ಯಕರ್ತರು, ಚುನಾವಣೆ ಹತ್ತಿರವಾಗುತ್ತಿದ್ದು 6 ತಿಂಗಳ ಮೊದಲೇ ಅಭ್ಯರ್ಥಿಯನ್ನು ಘೋಷಿಸಬೇಕು. ಕೊನೆಕ್ಷಣದಲ್ಲಿ ಘೋಷಿಸಿದರೆ ಪ್ರಚಾರಕ್ಕೆ ಕಷ್ಟವಾಗಲಿದೆ. ಈ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಲು ಹೊರಗಿನವರೂ ಪ್ರಯತ್ನಿಸು ತ್ತಿರುವ ಮಾತುಗಳು ಕೇಳಿಬರುತ್ತಿದ್ದು, ಅಂತವರಿಗೆ ಯಾವದೇ ಕಾರಣಕ್ಕೂ ಟಿಕೆಟ್ ನೀಡಬಾರದು. ಅನೇಕ ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯರಾಗಿ ದುಡಿಯುತ್ತಿರುವ ನಿಷ್ಠಾವಂತರಿಗೆ ಟಿಕೆಟ್ ನೀಡಬೇಕು ಎಂದು ಜಿ.ಪಂ. ಮಾಜಿ ಸದಸ್ಯ ಹೆಚ್.ಸಿ. ನಾಗೇಶ್ ಸಹಿತ ಇತರರು ಆಗ್ರಹಿಸಿದರು.
(ಮೊದಲ ಪುಟದಿಂದ) ಈ ಬಗ್ಗೆ ಸೋಮವಾರಪೇಟೆ ಸೇರಿದಂತೆ ಇತರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನಿರ್ಣಯ ಕೈಗೊಳ್ಳಬೇಕು ಎಂಬ ಒತ್ತಾಯವೂ ಸಭೆಯಲ್ಲಿ ಕೇಳಿಬಂತು. ಕಾರ್ಯಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ತಮ್ಮ ಭಾಗದ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು. ಗ್ರಾಮೀಣ ಭಾಗದ ರಸ್ತೆಗಳನ್ನು ದುರಸ್ತಿಗೊಳಿಸಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಹಲವರು ಆಗ್ರಹಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿ ಮನೆಗೂ ಮುಟ್ಟಿಸುವ ಕಾರ್ಯ ಆಗಬೇಕಿದೆ. ಆ ಮೂಲಕ ಮುಂದಿನ ಚುನಾವಣೆಯನ್ನು ಸಂಘಟಿತವಾಗಿ ಎದುರಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದರು.
ರಾಜ್ಯ ಸರ್ಕಾರದಿಂದ ಕೊಡಗಿಗೆ ಹೆಚ್ಚಿನ ಅನುದಾನ ಹರಿದುಬಂದಿದೆ. ಕಾರ್ಯಕರ್ತರ ಸಮಸ್ಯೆಗಳು, ಗೊಂದಲಗಳನ್ನು ಬಗೆಹರಿಸಲು ಪಕ್ಷದ ಮುಖಂಡರು ಬದ್ಧರಾಗಿದ್ದಾರೆ ಎಂದು ವೀಣಾ ಅಚ್ಚಯ್ಯ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ಪ್ರಬಾರ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಕಾಂಗ್ರೆಸ್ ಪಕ್ಷ ಸಂಘಟನೆಯ ಜವಾಬ್ದಾರಿ ಮತ್ತು ಅನಿವಾರ್ಯತೆ ಎಲ್ಲರ ಮೇಲಿದೆ. ಮತಗಟ್ಟೆ ವ್ಯಾಪ್ತಿಯಲ್ಲಿ ಪಕ್ಷ ಇನ್ನಷ್ಟು ಸಂಘಟಿತವಾಗಬೇಕಿದೆ. 5 ಲಕ್ಷಕ್ಕೂ ಅಧಿಕ ಮಂದಿಯಿರುವ ಜಿಲ್ಲೆಯಲ್ಲಿ 104 ಗ್ರಾ.ಪಂ.ಗಳ ಅಧಿಕಾರ ಕಾಂಗ್ರೆಸ್ ಕೈಲಿದ್ದರೂ ಸಹ ಕೇವಲ 6 ಸಾವಿರದಷ್ಟು ಮಾತ್ರ ಸದಸ್ಯತ್ವ ಪಡೆಯಲಾಗಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಬೃಹತ್ ಸದಸ್ಯತ್ವ ಆಂದೋಲನ ಹಮ್ಮಿಕೊಳ್ಳಬೇಕಿದೆ ಎಂದರು.
ವಿಧಾನ ಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದ್ದು, ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳಬೇಕು ಎಂದ ರಮೇಶ್, 95ಸಿ ಅಡಿಯಲ್ಲಿ ಈಗಾಗಲೇ 1300 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ 2500 ಮಂದಿಗೆ ಹಕ್ಕುಪತ್ರ ವಿತರಿಸಲಾಗುವದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಜನ್ಧನ್, ಸ್ವಚ್ಛಭಾರತ್, ಫಸಲ್ ಭೀಮಾ, ನೋಟು ಅಮಾನ್ಯ ಯೋಜನೆಗಳು ವಿಫಲತೆ ಕಂಡಿವೆ. ಕೇಂದ್ರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಮುಂದಿನ ವಿಧಾನ ಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಹಿನ್ನೆಲೆ ಸಭೆ ಆಯೋಜಿಸಲಾಗಿದೆ. ರಾಜ್ಯ ಸರ್ಕಾರದ 4 ವರ್ಷಗಳ ಸಾಧನೆಯ ಬಗ್ಗೆ ಎಲ್ಲೆಡೆ ಚರ್ಚೆ ನಡೆಸಬೇಕು. ಮುಂದಿನ ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ್ ಅವರು ಕ್ಷೇತ್ರಕ್ಕ ಭೇಟಿ ನೀಡಲಿದ್ದಾರೆ. ಆ ಸಂದರ್ಭ ಬೃಹತ್ ಸಮಾವೇಶ ನಡೆಸಲಾಗುವದು ಎಂದರು.
ವೇದಿಕೆಯಲ್ಲಿ ಪಕ್ಷದ ಉಪಾಧ್ಯಕ್ಷರುಗಳಾದ ನಂದಕುಮಾರ್, ಪೊನ್ನಪ್ಪ, ನಟೇಶ್ಗೌಡ, ಖಜಾಂಚಿ ಮನು ಮೇದಪ್ಪ, ವಕ್ತಾರ ಟಾಟು ಮೊಣ್ಣಪ್ಪ, ಹೆಚ್.ಸಿ. ನಾಗೇಶ್, ಪ್ರಧಾನ ಕಾರ್ಯದರ್ಶಿ ಬಿ.ಎನ್. ಪ್ರಕಾಶ್, ಎಸ್.ಎಂ. ಚಂಗಪ್ಪ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಹಿಂದುಳಿದ ವರ್ಗಗಳ ಅಧ್ಯಕ್ಷ ಸರ ಚಂಗಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ, ಜಿ.ಪಂ. ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಕುಮುದಾ ಧರ್ಮಪ್ಪ, ಲತೀಫ್, ಯುವ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಹನೀಫ್, ಕ್ಷೇತ್ರ ಅಧ್ಯಕ್ಷ ಮಿಥುನ್, ಪ್ರಮುಖರಾದ ಮಂಜುನಾಥ್, ತೆನ್ನೀರ ಮೈನಾ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಬ್ಲಾಕ್ ಕಾರ್ಯದರ್ಶಿ ವಿ.ಎ. ಲಾರೆನ್ಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.