ಮಡಿಕೇರಿ, ಮೇ 31: ನಗರದ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಅಭಿವೃದ್ಧಿಗೊಳ್ಳುತ್ತಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನ, ಭಾರತ ಸೇನೆಯ ಸಬ್ ಏರಿಯಾ ಕಮಾಂಡರ್ ಆಗಿರುವ ಮೇಜರ್ ಜನರಲ್ ಕೆ.ಜಿ. ನಿರ್ಜರ್ ಅವರು ಇಂದು ಖುದ್ದು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.ಈ ಸಂದರ್ಭ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ನಿವೃತ್ತ ಮೇಜರ್ ಬಿದ್ದಂಡ ಎ. ನಂಜಪ್ಪ ಅವರುಗಳು ಹಾಜರಿದ್ದು, ಸ್ಮಾರಕ ಭವನದ ಕಾಮಗಾರಿ ಪ್ರಗತಿಯ ಮಾಹಿತಿ ನೀಡಿದರು.

ಜನರಲ್ ತಿಮ್ಮಯ್ಯ ಅವರ ಜೀವನ ಸಾಧನೆ, ಸೇನೆಯಲ್ಲಿ ಸಲ್ಲಿಸಿದ ಸೇವೆ ಮತ್ತಿತರ ಮಾಹಿತಿಯನ್ನು ಒಳಗೊಂಡ ಸ್ಮಾರಕ ನಿರ್ಮಾಣ ವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಿಲಿಟರಿ ಟ್ಯಾಂಕ್, ಯುದ್ಧ ವಿಮಾನ, ಜನರಲ್ ತಿಮ್ಮಯ್ಯ ಅವರು ಬಳಸುತ್ತಿದ್ದ ವಾಹನ ಹೀಗೆ ಹಲವು ರೀತಿಯ ಪರಿಕರಗಳು ಸ್ಮಾರಕ ಭವನದಲ್ಲಿ ಇರಲಿವೆ ಎಂದು ಅವರು ತಿಳಿಸಿದರು.

ಅಲ್ಲದೆ, ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಕೆಲಸ ಶೀಘ್ರವಾಗಿ ಪೂರೈಸಲು

(ಮೊದಲ ಪುಟದಿಂದ) ಅನುಕೂಲವಾಗುವಂತೆ ಸೇನೆಯ ‘ಕುಮಾವ್ ರೆಜಿಮೆಂಟ್'ನ ಓರ್ವ ಸೈನ್ಯಾಧಿಕಾರಿಯನ್ನು ಇಲ್ಲಿಗೆ ನಿಯೋಜಿಸುವಂತೆ ಮೆ.ಬಿ.ಎ. ನಂಜಪ್ಪ ಕೋರಿದರು.

ಅಲ್ಲದೆ, ಚಂಡೀಘಡ್ ರಾಣಿಕೇತ್‍ನಲ್ಲಿರುವ ಜನರಲ್ ತಿಮ್ಮಯ್ಯ ಸ್ಮಾರಕದ ನಿರ್ವಹಣೆ ಹೊಂದಿರುವ ಕುಮಾವ್ ರೆಜಿಮೆಂಟ್‍ನಿಂದಲೇ ಮಡಿಕೇರಿ ಸ್ಮಾರಕ ಭವನ ನಿರ್ವಹಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂದು ಬೇಡಿಕೆ ಸಲ್ಲಿಸಿದಾಗ, ಈ ಬಗ್ಗೆ ಸೇನಾ ಮುಖ್ಯಸ್ಥರೊಂದಿಗೆ ವ್ಯವಹರಿಸಿ ಸೂಕ್ತ ಕ್ರಮಕೈಗೊಳ್ಳುವದಾಗಿ ಮೇ.ಜ. ಶೀಘ್ರವಾಗಿ ನಿರ್ಜರ್ ಆಶ್ವಾಸನೆ ನೀಡಿದರು.

ಜನರಲ್ ತಿಮ್ಮಯ್ಯ ಅವರು ಬಳಸುತ್ತಿದ್ದ ಯುದ್ಧ ಸಾಮಗ್ರಿಗಳನ್ನು ಎರಡು ಮೂರು ತಿಂಗಳೊಳಗೆ ಚಂಡೀಘಡದ ರಾಣಿಕೇತ್‍ನಲ್ಲಿರುವ ಸ್ಮಾರಕದಿಂದ ನಗರಕ್ಕೆ ಕಳುಹಿಸಿಕೊಡಲಾಗುವದು. ಜನರಲ್ ತಿಮ್ಮಯ್ಯ ಅವರ ಮ್ಯೂಸಿಯಂ ನಿರ್ಮಾಣ ಮಾಡುತ್ತಿರುವದು ಭಾರತೀಯ ಸೇನಾ ಕ್ಷೇತ್ರಕ್ಕೆ ನೀಡುತ್ತಿರುವ ಗೌರವವಾಗಿದೆ. ಈ ನಿಟ್ಟಿನಲ್ಲಿ ಆಕರ್ಷಕ ಮ್ಯೂಸಿಯಂ ನಿರ್ಮಾಣ ಮಾಡುವಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದು ಅವರು ತಿಳಿಸಿದರು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ರಾಘವೇಂದ್ರ, ಕಾರ್ಯಪ್ಪ ಇತರರು ಇದ್ದರು.