ರಾಜ್ಯದಲ್ಲಿ ಅಧಿಕಾರದಲ್ಲಿರುವದು ಕಾಂಗ್ರೆಸ್ ಪಕ್ಷ... ಬಿ.ಜೆ.ಪಿ. ವಿಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೊಡಗಿನಲ್ಲಿ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಶಾಸಕರು ಆಯ್ಕೆಯಾಗದಿದ್ದರೂ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿರುವದರಿಂದ ಒಂದಷ್ಟು ಹಿಡಿತ ಸಹಜವಾಗಿ ಇರುತ್ತದೆ. ಇತ್ತೀಚೆಗೆ ಪಕ್ಷವು ಜಿಲ್ಲೆಯ ವೀಣಾ ಅಚ್ಚಯ್ಯ ಅವರನ್ನು ಎಂ.ಎಲ್.ಸಿ.ಯಾಗಿ ಮಾಡಿದ್ದು ಕಾಂಗ್ರೆಸ್ಗೆ ಶಾಸಕರಿಲ್ಲದ ಕೊರತೆ ಸ್ವಲ್ಪಮಟ್ಟಿಗೆ ನೀಗಿದೆ.
ಜಿಲ್ಲೆಯಲ್ಲಿ ಇದೀಗ ಹೊಸತೊಂದು ಬೆಳವಣಿಗೆ ಕಂಡು ಬರುತ್ತಿರುವದು ಅಚ್ಚರಿ. ಸಾರ್ವಜನಿಕರು ಮಾತ್ರವಲ್ಲದೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳೆರಡರಿಂದಲೂ ಜನರ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂಬ ಕೂಗು ಕೇಳಿಬಂದಿದೆ.
ಬಿ.ಜೆ.ಪಿ.ಯ ಶಾಸಕ, ವೀರಾಜಪೇಟೆ ಕ್ಷೇತ್ರದ ಪ್ರತಿನಿಧಿ ಕೆ.ಜಿ. ಬೋಪಯ್ಯ ಅವರು ಜಿಲ್ಲಾಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಗುಡುಗಿದ್ದಾರೆ. ಹಿರಿಯ ಅಧಿಕಾರಿಗಳ ಮೇಲೆಯೇ ಶಾಸಕರು ಭ್ರಷ್ಟಾಚಾರ-ಕಾರ್ಯಗಳ ವಿಳಂಬದ ಬಗ್ಗೆ ನೇರ ಆರೋಪ ಮಾಡಿದ್ದು ಗಮನಾರ್ಹ.
ಭ್ರಷ್ಟಾಚಾರದ ವಿರುದ್ಧ ಜನಾಂದೋಲನವಾಗಬೇಕಿದೆ ಎಂದು ಕರೆ ನೀಡಿರುವ ಶಾಸಕರು, ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಮಾಹಿತಿ ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಜೂನ್ 2 ರಂದು (ನಾಳೆ) ಬಿ.ಜೆ.ಪಿ.ಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.
ಈ ನಡುವೆ ಮೊನ್ನೆ ನಡೆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಮುಖಂಡರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವದು ಮಾತ್ರವಲ್ಲದೆ, ಆಡಳಿತ ಪಕ್ಷದಲ್ಲಿದ್ದರೂ ಗ್ರಾ.ಪಂ. ಮಟ್ಟದಿಂದಲೇ ಯಾವದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರೊಬ್ಬರು ಜನರ ಬೇಡಿಕೆಯಂತೆ ಕನಿಷ್ಟ ಒಂದು ಬಸ್ ವ್ಯವಸ್ಥೆ ಕಲ್ಪಿಸಿಕೊಡಲು ಸಾಧ್ಯವಾಗಿಲ್ಲ ಎಂದು ನೋವು ತೋಡಿಕೊಂಡಿದ್ದು, ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ವೀರಾಜಪೇಟೆ ತಾಲೂಕು ಕಚೇರಿಯ ವ್ಯವಸ್ಥೆಯ ಬಗ್ಗೆಯಂತೂ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮಡುಗಟ್ಟಿದೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಕಿಸಾನ್ ಸಂಘ ಒಂದಷ್ಟು ಚುರುಕುಮುಟ್ಟಿಸಿದೆ. ಇವರ ಮನವಿಯಂತೆ ತಹಶೀಲ್ದಾರರನ್ನು ದಿಢೀರ್ ಬದಲಾಯಿಸಿ ಬೆಂಗಳೂರಿನಿಂದ ಹೊಸ ತಹಶೀಲ್ದಾರ್ ಅವರನ್ನು ಉಸ್ತುವಾರಿ ಸಚಿವರು ನಿಯೋಜಿಸಿದ್ದಾರೆ. ಕೊಡಗು ಪುಟ್ಟ ಜಿಲ್ಲೆಯಾದರೂ ಸಮಸ್ಯೆಗಳು ಅಪಾರ.
ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ರೈತರಿಗೆ ತಾವು ಹೊಂದಿರುವ ಜಾಗವೇ ಬದುಕಿನ ಆಧಾರ. ಇಲ್ಲಿನ ಭೂ ನಿಬಂಧನೆಗಳೂ ವಿಭಿನ್ನ. ಸೂಕ್ತ ದಾಖಲಾತಿ ಇಲ್ಲದಿದ್ದಲ್ಲಿ ಬ್ಯಾಂಕ್ನಿಂದ ಸಾಲ ಪಡೆಯುವದಾಗಲಿ ಅಥವಾ ಇನ್ನಿತರ ಅಗತ್ಯತೆಗಳನ್ನು ಹೊಂದಿಕೊಳ್ಳಲು ಕಷ್ಟಸಾಧ್ಯವಾಗಲಿದೆ. ಇದರೊಂದಿಗೆ ಕೋವಿ ವಿನಾಯಿತಿಯ ದಾಖಲೆಗೂ ಜನ ಮುಗಿಬೀಳುತ್ತಿದ್ದಾರೆ. ಒಮ್ಮೆ ದಾಖಲಾತಿ ಸಮರ್ಪಕಗೊಂಡರೆ ಆನಂತರ ಹೆಚ್ಚಿನ ಸಮಸ್ಯೆಗಳು ಉದ್ಭವಿಸದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಸರಕಾರ, ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕಿದೆ. ಆಂದೋಲನದ ರೀತಿಯಲ್ಲಿ ಜಿಲ್ಲೆಯ ಜನತೆಯ ದಾಖಲಾತಿಗಳನ್ನು ಸರಿಪಡಿಸುವತ್ತ ಕಾರ್ಯತತ್ಪರರಾಗಬೇಕಿದೆ. ಕೆಲವು ಸಮಯ ಇದನ್ನು ವಿಶೇಷವಾಗಿ ಪರಿಗಣಿಸಿ ಕೆಲಸ ನಿರ್ವಹಿಸುವ ವ್ಯವಸ್ಥೆ ಮಾಡಿದರೆ, ಸಾರ್ವಜನಿಕರ ಅಲೆದಾಟ ತಪ್ಪುತ್ತದೆ.
ಇನ್ನು ಭ್ರಷ್ಟಾಚಾರದ ವಿಚಾರ ಬೇರೆ. ಈ ಆರೋಪ ಸರ್ವೇ ಸಾಮಾನ್ಯವಾದಂತಿದೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಆರೋಪಗಳು ನಿರಂತರವಾಗಿ ಕೇಳಿಬಂದರೂ ವ್ಯವಸ್ಥೆಗಳು ಹಾಗೆಯೇ ಮುಂದುವರಿಯುತ್ತಿವೆ. ಅಧಿಕಾರಿಗಳು-ಸಿಬ್ಬಂದಿಗಳು ತಮಗೆ ಸಮಸ್ಯೆಗಳಿದ್ದಲ್ಲಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರಕಾರದಿಂದ ಪರಿಹಾರ ಕಂಡುಕೊಳ್ಳುವದು ಒಳಿತು. ಇತ್ತೀಚಿನ ಕೆಲವು ದಿನಗಳಲ್ಲಿ ಹೋರಾಟದ ಹಾದಿ ತೀವ್ರಗೊಳ್ಳುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ.
ಈ ಬಗ್ಗೆ ಸಂಬಂಧಿಸಿದವರು ಎಚ್ಚೆತ್ತುಕೊಳ್ಳುವದು ಒಳಿತೆನಿಸುತ್ತದೆ. ವಿಪಕ್ಷ ಹೋರಾಟ ನಡೆಸುವದು ಸಹಜ. ಆಡಳಿತ ಪಕ್ಷ ಲೋಪಗಳನ್ನು ಸರಿಪಡಿಸುವತ್ತ ಗಮನಹರಿಸಬೇಕಿದೆ.
- ಶಶಿ ಸೋಮಯ್ಯ.