ಶ್ರೀಮಂಗಲ, ಮೇ 31: ಜಿಲ್ಲೆಯ ಪರಿಸರ ನಿರಂತರ ನಾಶವಾದರೆ ಹವಾಮಾನ ವೈಪರೀತ್ಯ ಉಂಟಾಗಿ ಜಿಲ್ಲೆಯ ಪ್ರಮುಖ ಬೆಳೆ ಕಾಫಿಯ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಆದ್ದರಿಂದ ಜಿಲ್ಲೆಯ ಪರಿಸರ ಹಾಗೂ ಮೂಲ ಸ್ವರೂಪಕ್ಕೆ ದಕ್ಕೆ ತರುವ ಯಾವದೇ ಯೋಜನೆಗಳನ್ನು ಜಾರಿ ಮಾಡುವದಕ್ಕೆ ಜಿಲ್ಲಾ ಬೆಳೆಗಾರರ ಒಕ್ಕೂಟ ವಿರೋಧ ವ್ಯಕ್ತಪಡಿಸಿದ್ದು, ಜೂ. 2 ರಂದು ಮಡಿಕೇರಿಯಲ್ಲಿ ಜಿಲ್ಲೆಯ ಹಿತಸಂರಕ್ಷಣೆ ಹಾಗೂ ಮೂಲ ಸ್ವರೂಪವನ್ನು ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ನಡೆಯುವ ಪ್ರತಿಭಟನೆಗೆ ಒಕ್ಕೂಟ ಬೆಂಬಲ ನೀಡಲಿದೆ ಎಂದು ಇಂದು ನಡೆದ ಒಕ್ಕೂಟದ ಸಭೆಯಲ್ಲಿ ನಿರ್ಧರಿಸ ಲಾಯಿತು.

ಒಕ್ಕೂಟದ ಪ್ರಬಾರ ಅಧ್ಯಕ್ಷ ಕೈಬುಲಿರ ಎಂ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಮೂಲಕ ಕೇರಳ ರಾಜ್ಯಕ್ಕೆ ಪ್ರಯೋಜನವಾಗುವಂತೆ ರೂಪಿಸಿರುವ ಹೈಟೆನ್ಷನ್ ಮಾರ್ಗ ದಿಂದ ಜಿಲ್ಲೆಯ ಲಕ್ಷಾಂತರ ಮರಗಳ ಹನನವಾಗಿವೆ. ಜಿಲ್ಲೆಯ ಮೂಲಕ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮಾರ್ಗ ರೂಪಿಸುವ ಹುನ್ನಾರವನ್ನು ನಿಲ್ಲಿಸಬೇಕು. ಜಿಲ್ಲೆಯ ಜನತೆ ಒಗ್ಗಟ್ಟಾಗಿ ಕೊಡಗನ್ನು ಕೊಡಗಾಗಿಯೇ ಉಳಿಸಿಕೊಳ್ಳಲು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

2005 ರಿಂದ 2015ರ ವರೆಗಿನ ಹತ್ತು ವರ್ಷದ ಅವಧಿಯಲ್ಲಿ ಕೊಡಗು ಮೊಡೆಲ್ ಫಾರೆಸ್ಟ್ ಮೂಲಕ ನಡೆಸಿದ ಸಂಶೋಧನಾ ಅಧ್ಯಯನ ಉಪಗ್ರಹ ಸರ್ವೆಯಲ್ಲಿ ಕೊಡಗು ಜಿಲ್ಲೆಯ 1900 ಹೆಕ್ಟೇರ್ ಭತ್ತದ ಕೃಷಿ ಕಡಿಮೆಯಾಗಿದ್ದು, ಸ್ವಾಭಾವಿಕ ಅರಣ್ಯ ಜಿಲ್ಲೆಯಲ್ಲಿ 1301.7 ಚ.ಕಿಮೀ.ಗೆ ಕುಸಿತವಾಗಿದೆ. ಈ ಮೂಲಕ 479 ಹೆಕ್ಟೇರ್ ಅರಣ್ಯ ನಾಶವಾಗಿದ್ದು, ಗೋಚರಿಸಿದೆ ಎಂದು ಸಭೆಯಲ್ಲಿ ಕಳವಳ ವ್ಯಕ್ತವಾಯಿತು.

ಮಾರಕ ಯೋಜನೆಗಳನ್ನು ರೂಪಿಸುವದರಿಂದ ಜಿಲ್ಲೆಯಲ್ಲಿ ಹವಮಾನ ವೈಪರೀತ್ಯ ಉಂಟಾಗಿ ಉಷ್ಣಾಂಶ ಏರಿಕೆಯಾಗಲಿದೆ. ಜಿಲ್ಲೆಯ ಕಾಫಿ ಬೆಳೆಯ ಮೇಲೆ ಮಾರಕ ಪರಿಣಾಮ ಬೀರಲಿದೆ.

ಜಿಲ್ಲೆಯ ಮಣ್ಣಿನಲ್ಲಿ ತೇವಾಂಶ ಕುಸಿಯುತ್ತಿರುವದು, ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿತ, ಮಳೆ ಕೊರತೆ, ನೀರಿನ ಸಂಗ್ರಹ ಬರಡಾಗುವದು ಇತ್ಯಾದಿ ಆತಂಕ ಎದುರಾಗಲಿದ್ದು, ಈಗಾಗಲೇ ಪ್ರಸಕ್ತ ವರ್ಷ ಇದರ ಅನುಭವವಾಗಿದೆ, ಈ ಸಂದರ್ಭ ನಾವು ಎಚ್ಚೆತ್ತುಕೊಂಡು ಮುಂದಿನ ಪೀಳಿಗೆಗೆ ಇರುವ ಕೊಡಗನ್ನು ಹಾಳು ಮಾಡದೆ ಕಾಪಾಡಿ ಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸಲಹೆಗಾರ ಚೆಪ್ಪುಡಿರ ಶರಿ ಸುಬ್ಬಯ್ಯ, ಖಜಾಂಚಿ ಮಾಣೀಯ ವಿಜಯ್ ನಂಜಪ್ಪ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ಶ್ರೀಮಂಗಲ ಹೋಬಳಿ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಕುಟ್ಟದ ಬೊಳ್ಳೇರ ರಾಜ ನಂಜಪ್ಪ, ಆಂಡಮಾಡ ಸತೀಶ್, ಬೊಳ್ಳೇರ ವಿನಯ್ ಕುಟ್ಟಪ್ಪ, ಕೋಟ್ರಮಾಡ ಅರುಣ್ ಅಪ್ಪಣ್ಣ, ಚೊಟ್ಟೆಯಂಡ ಮಾಡ ವಿಶು, ಕಟ್ಟೇರ ಈಶ್ವರ, ಮನ್ನೇರ ರಮೇಶ್, ಮಚ್ಚಮಾಡ ಸೋಮಯ್ಯ, ತಡಿಯಂಗಡ ಕರುಂಬಯ್ಯ, ಮತ್ತಿತರರು ಹಾಜರಿದ್ದರು.

*ಶ್ರೀಮಂಗಲ : ಕೊಡಗು ಅಭಿವೃದ್ಧಿ ಹೆಸರಿನಲ್ಲಿ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುತ್ತಿರುವ ದನ್ನು ಖಂಡಿಸಿ ಪರಿಸರವನ್ನು ಸಂರಕ್ಷಿಸಿಕೊಳ್ಳಲು ಜಿಲ್ಲೆಯ ಸರ್ವರು ಮುಂದಾಗಬೇಕು. ಈ ನಿಟ್ಟಿನಲ್ಲಿ ಮಡಿಕೇರಿಯಲ್ಲಿ ಜೂನ್ 2ಕ್ಕೆ ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಗೆ ಟಿ. ಶೆಟ್ಟಿಗೇರಿಯ ಮೂಂದ್‍ನಾಡ್ ಕೊಡವ ಸಮಾಜ ಬೆಂಬಲ ನೀಡಲು ನಿರ್ಧರಿಸಿದೆ.

ಟಿ. ಶೆಟ್ಟಿಗೇರಿ ಕೊಡವ ಸಮಾಜ ಕಚೇರಿಯಲ್ಲಿ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕೊಡಗು ಜಿಲ್ಲೆಗೆ ಮಾರಕವಾಗುವ ಯೋಜನೆ, ಜಿಲ್ಲೆಯ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳು ಕೃಷಿಯೇತರ ಚಟುವಟಿಕೆಗೆ ಪರಿವರ್ತನೆ ಯಾಗುವದು, ಪ್ರವಾಸೋದ್ಯಮದ ಹೆಸರಿನಲ್ಲಿ ರೆಸಾರ್ಟ್ ಸ್ಥಾಪನೆ, ಜಿಲ್ಲೆಯ ಮೂಲ ನಿವಾಸಿಗಳ ಜಾಗ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯವರಿಗೆ ಮಾರಾಟವಾಗುವದನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಜಿಲ್ಲೆಯ ಮೂಲ ನಿವಾಸಿಗಳು ಒಂದಾಗಿ ಪ್ರಯತ್ನಿಸಬೇಕಾಗಿದೆ ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಅನಧಿಕೃತವಾಗಿ ಮರ ಹನನ, ನದಿ ದಡಗಳ ಅಕ್ರಮ ಒತ್ತುವರಿ ಹಾಗೂ ಅಕ್ರಮ ಮರಳುಗಾರಿಕೆ ಜಿಲ್ಲೆಯ ಮೂಲಸ್ವರೂಪಕ್ಕೆ ಧಕ್ಕೆ ತರುತ್ತಿದ್ದು, ಇವುಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಸರಕಾರ ಮುಂದಾಗ ಬೇಕಾಗಿದೆ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಈ ನಿಟ್ಟಿನಲ್ಲಿ ಜಿಲ್ಲೆಯ ಹಿತಸಂರಕ್ಷಣೆಗೆ ಜೂ. 2 ರಂದು ಹಮ್ಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಗೆ ಕೊಡವ ಸಮಾಜದಿಂದ ಸಂಪೂರ್ಣ ಬೆಂಬಲ ನೀಡಲಾಗು ವದು. ಇತರ ಸಂಘಟನೆಗಳು ಸಹ ಬೆಂಬಲ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.

ಸಭೆಯಲ್ಲಿ ಸಮಾಜದ ಕಾರ್ಯದರ್ಶಿ ಮನ್ನೇರ ರಮೇಶ್, ಹಿರಿಯ ಸಲಹೆಗಾರ ಮಚ್ಚಮಾಡ ಸೋಮಯ್ಯ, ಮೂಂದ್‍ನಾಡ್ ತಕ್ಕರಾದ ಕೈಬುಲಿರ ಹರೀಶ್, ನಿರ್ದೇಶಕರುಗಳಾದ ತಡಿಯಂಗಡ ಕರುಂಬಯ್ಯ, ಮಾಣೀರ ವಿಜಯ್ ನಂಜಪ್ಪ, ಕಟ್ಟೇರ ಈಶ್ವರ, ಚೊಟ್ಟೆಯಂಡಮಾಡ ವಿಶು ಮತ್ತಿತರರು ಹಾಜರಿದ್ದರು.