ಮಡಿಕೇರಿ, ಮೇ 31: ಕೊಡಗು ಜಿಲ್ಲೆಯಲ್ಲಿ ತಂಬಾಕು ನಿಷೇಧ ಕಾಯ್ದೆಯಂತೆ ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಆಂದೋಲನ, ಕಾರ್ಯಾಚರಣೆ ಮುಂದುವರೆಯುತ್ತಿದೆ. ಪ್ರಸಕ್ತ ವರ್ಷ ಜನವರಿಯಿಂದ ಈತನಕ ಕಾನೂನು ಉಲ್ಲಂಘನೆಯ ವಿವಿಧ 1534 ಪ್ರಕರಣಗಳನ್ನು ಪೊಲೀಸ್ ಇಲಾಖೆ ದಾಖಲಿಸಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ರೂ. 2.12 ಲಕ್ಷ ದಂಡ ವಿಧಿಸಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 2135 ಪ್ರಕರಣಗಳು ದಾಖಲಾಗಿದ್ದು, ರೂ. 1.86 ಲಕ್ಷ ದಂಡ ವಿಧಿಸಲಾಗಿತ್ತು. ಈ ಕಾರ್ಯಾಚರಣೆ ಮತ್ತಷ್ಟು ಮುಂದುವರೆಯಲಿದೆ. ಇದರೊಂದಿಗೆ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಆಂದೋಲನವೂ ನಡೆಯುತ್ತಿದೆ.
ಈ ನಿಟ್ಟಿನಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಭಾರತೀಯ ದಂತ ವೈದ್ಯರ ಸಂಘ, ಕೊಡಗು ದಂತ ಮಹಾವಿದ್ಯಾಲಯ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚರಣೆಯ ಅಂಗವಾಗಿ ತಂಬಾಕು ವಿರೋಧಿ ಜಾಥಾಕ್ಕೆ ಚಾಲನೆ ನೀಡಲಾಯಿತು. ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವ ಜಾಥಾ ನಗರದ ಗಾಂಧಿ ಮೈದಾನದಿಂದ ಆರಂಭಗೊಂಡಿದ್ದು, ಜಿಲ್ಲೆಯ ವಿವಿಧೆಡೆ ಸಂಚರಿಸಲಿದೆ.
ಜಾಥಾಕ್ಕೆ ಚಾಲನೆ ನೀಡಿದ ಪ್ರಧಾನ ಜಿಲ್ಲಾ
(ಮೊದಲ ಪುಟದಿಂದ) ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಅವರು ಎಲ್ಲಾ ಹಂತದ ಜನರೂ ಇಂದು ತಂಬಾಕು ಸೇವನೆಯ ಚಟಕ್ಕೆ ಒಳಗಾಗುತ್ತಿರುವದು ವಿಷಾದನೀಯವಾಗಿದ್ದು, ಇದನ್ನು ನಿಯಂತ್ರಿಸಬೇಕು. ತಂಬಾಕು ಬಳಸದೆ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಜನರು ಈ ಬಗ್ಗೆ ಜಾಗೃತಿ ವಹಿಸಬೇಕು. ತಂಬಾಕು ಮುಕ್ತ ಜೀವನ ನಡೆಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ಇಲಾಖೆ ನಡೆಸಿರುವ ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಪವನೇಶ್, ಹಿರಿಯ ಸಿವಿಲ್ ನ್ಯಾಯಾಧೀಶ ಸೆಲ್ವಕುಮಾರ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ, ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ತಂಬಾಕು ನಿಯಂತ್ರಣ ಹೈಪವರ್ ಕಮಿಟಿಯ ಡಾ. ಜಾನ್ ಕೆನಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ದಂತ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಸುನಿಲ್ ಮುದ್ದಯ್ಯ ಮತ್ತಿತರರು ಹಾಜರಿದ್ದರು.
ನಾಪೆÇೀಕ್ಲು : ಅಂತರ್ರಾಷ್ಟ್ರೀಯ ತಂಬಾಕು ವಿರೋಧಿ ದಿನಾಚರಣೆಯ ಅಂಗವಾಗಿ ಇಂಡಿಯನ್ ಡೆಂಟಲ್ ಅಸೋಸಿಯೇಶನ್, ಕೊಡಗು ದಂತ ಮಹಾ ವಿದ್ಯಾಲಯ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಾಪೆÇೀಕ್ಲು ಪಟ್ಟಣದಲ್ಲಿ ತಂಬಾಕು ನಿಷೇಧ ಹಾಗೂ ಜಾಗೃತಿ ಬಗ್ಗೆ ಜಾಥಾ ನಡೆಯಿತು.
ಇದರ ಪ್ರಯುಕ್ತ ನಾಪೆÇೀಕ್ಲು ಬಸ್ ನಿಲ್ದಾಣದಲ್ಲಿ ಜಾಗೃತಿ ನಾಟಕ ಆಯೋಜಿಸಲಾಗಿತ್ತು. ಈ ಸಂದರ್ಭ ಮಾತನಾಡಿದ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬೋಪಣ್ಣ, ಪ್ರಪಂಚದಲ್ಲಿಯೇ ನಮ್ಮ ದೇಶದಲ್ಲಿ ತಂಬಾಕು ಸೇವನೆಯಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ತಂಬಾಕು ಸೇವನೆ ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣ. ಈ ಬಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ತಂಬಾಕು ಮುಕ್ತ ಸಮಾಜದಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದರು.
ಜಾಥಾದಲ್ಲಿ ಸ್ಥಳೀಯ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು, ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು, ನಾಪೆÇೀಕ್ಲು ನಾಲ್ನಾಡ್ ರಿಕ್ರಿಯೇಶನ್ ಮತ್ತು ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.