ಸೋಮವಾರಪೇಟೆ, ಮೇ 31: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಪಟ್ಟಣದ ಎಲ್ಲೆಂದರಲ್ಲಿ ಕಸ ಕಂಡುಬರುತ್ತಿದ್ದು, ಕೆಲವೆಡೆ ಸಂಗ್ರಹಿಸುವ ಕಸವನ್ನು ನಗರದ ಹೃದಯಭಾಗದಲ್ಲಿ ಶೇಖರಿಸಿ ಸುಡುತ್ತಿರುವದರಿಂದ ವಾತಾವರಣ ದುರ್ಗಂಧಮಯವಾಗುತ್ತಿದೆ.
ಕಸ ವಿಲೇವಾರಿಗೆ ಇದುವರೆಗೂ ಸೂಕ್ತ ಜಾಗ ಗುರುತಿಸದ ಹಿನ್ನೆಲೆ ಸಮಸ್ಯೆ ಜಟಿಲಗೊಳ್ಳುತ್ತಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮಾಡುವ ವಾಹನ ವಾರಕ್ಕೆ ಒಂದು ಸಾರಿ ಮಾತ್ರ ಆಗಮಿಸುತ್ತಿದೆ. ಇದರಿಂದಾಗಿ ಬಹುತೇಕ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ. ಬಸ್ ನಿಲ್ದಾಣದ ಬಳಿ ಇರುವ ತರಕಾರಿ ಅಂಗಡಿ, ದಿನಸಿ ಅಂಗಡಿ ಹಾಗೂ ಹೊಟೇಲ್‍ಗಳ ತ್ಯಾಜ್ಯಗಳನ್ನು ಸಿ.ಕೆ. ಸುಬ್ಬಯ್ಯ ರಸ್ತೆಗೆ ಹೊಂದಿಕೊಂಡಿರುವ ಶೌಚಾಲಯದ ಬಳಿ ಸುರಿಯಲಾಗುತ್ತಿದೆ.
ಪಟ್ಟಣದಲ್ಲಿ ಸಂಗ್ರಹವಾದ ಕಸವನ್ನು ಪಟ್ಟಣ ಪಂಚಾಯಿತಿಯವರು ಮಾರುಕಟ್ಟೆಯ ಒಳಗೆ ಸುರಿದು ಬೆಂಕಿ ಹಚ್ಚಿ ಸುಡುತ್ತಿದ್ದಾರೆ. ಉಳಿದ ಕಸಗಳನ್ನು ಮಾರುಕಟ್ಟೆಯ ಆವರಣದಲ್ಲಿರುವ ಗುಂಡಿಗೆ ಸುರಿಯುತ್ತಿದ್ದಾರೆ. ಇದರಿಂದಾಗಿ ಇಡೀ ಪರಿಸರ ದುರ್ಗಂಧಮಯವಾಗಿದೆ.
ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಗುರುತಿಸಿ ವಿಲೇವಾರಿ ಮಾಡುವಂತೆ ಪಟ್ಟಣದ ನಾಗರಿಕ ವೇದಿಕೆ, ಜಯ ಕರ್ನಾಟಕ ಸಂಘಟನೆ ಸೇರಿದಂತೆ ಸಾರ್ವಜನಿಕರು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೂ ಸಹ ಪಂಚಾಯಿತಿ ಆಡಳಿತ ಮಂಡಳಿ ಗಟ್ಟಿನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಆರೋಪಿಸಿದ್ದಾರೆ.
ಕಸ ವಿಲೇವಾರಿ ಮಾಡಲು ಸೂಕ್ತ ಸ್ಥಳವನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಬಹುತೇಕ ಸ್ಥಳಗಳಲ್ಲಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹಸಿಕಸ ಮತ್ತು ಒಣ ಕಸ ಎಂದು ಪ್ರತ್ಯೇಕಿಸಲು ಪಂಚಾಯಿತಿ ವತಿಯಿಂದ ಬಕೇಟ್‍ಗಳನ್ನು ನೀಡಲಾಗಿದೆ. ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ ಎಂದು ಪ.ಪಂ. ಮುಖ್ಯಾಧಿಕಾರಿ ಭರವಸೆ ನೀಡಿದ್ದಾರೆ.