ಭಾಗಮಂಡಲ, ಮೇ 30: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವ ನಿಟ್ಟಿನಲ್ಲಿ ರಾಜ್ಯ ಗೃಹ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಭಾಗಮಂಡಲ ವ್ಯಾಪ್ತಿಯಲ್ಲಿ ಅಂಗಡಿ ಮಳಿಗೆಗಳಿಗೆ ಧಾಳಿ ನಡೆಸಿ ಸುಮಾರು 82 ಪ್ರಕರಣಗಳನ್ನು ದಾಖಲಿಸುವದರೊಂದಿಗೆ ರೂ. 6230 ದಂಡವನ್ನು ವಿಧಿಸಿದೆ.

ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಗೃಹ ಇಲಾಖೆ ಅಧಿಕಾರಿ ಜಾನ್ ಕೆನಡಿಯ ಹಾಗೂ ಸ್ಥಳೀಯ ಗ್ರಾ.ಪಂ., ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ, ಶಿಕ್ಷಣ ಸಂಸ್ಥೆ ಅಧಿಕಾರಿಗಳು ಸಭೆ ನಡೆಸಿ ನಾಲ್ಕು ತಂಡಗಳನ್ನು ರಚಿಸಿ ವಿವಿಧ ಅಂಗಡಿ ಮಳಿಗೆಗಳಿಗೆ ಧಾಳಿ ನಡೆಸಿದರು. ಸ್ಥಳೀಯ ಪಂಚಾಯಿತಿಯಿಂದ ನಾಮಫಲಕ ಅಳವಡಿಕೆಗೆ ಅಂಗಡಿ ಮಳಿಗೆಗಳಿಗೆ ಮಾಹಿತಿ ನೀಡಿದ್ದರೂ ನಾಮಫಲಕ ಅಳವಡಿಸದೆÀ ಇರುವದರಿಂದ ಹೆಚ್ಚಿನ ಅಂಗಡಿಗಳಿಗೆ ದಂಡ ವಿಧಿಸಲಾಯಿತು. ಸಿಂಡಿಕೇಟ್ ಬ್ಯಾಂಕ್ ಹಾಗೂ ವಿಎಸ್‍ಎಸ್‍ಎನ್ ಬ್ಯಾಂಕ್‍ಗಳಿಗೂ ದಂಡ ವಿಧಿಸಲಾಯಿತು. ತಲಕಾವೇರಿಯಲ್ಲಿಯೂ ಸಹ ಧೂಮಪಾನ ಮಾಡುತ್ತಿದ್ದವರಿಗೆ ದಂಡ ವಿಧಿಸಲಾಯಿತು.

ಈ ಸಂದರ್ಭ ಮಾತನಾಡಿದ ಅಧಿಕಾರಿ ಜಾನ್ ಕೆನಡಿಯ ಎಲ್ಲಾ ಅಂಗಡಿ ಮಳಿಗೆಗಳಿಗೆ ಖಾಯಂ ಆಗಿ ಧೂಮಪಾನ ನಿಷೇಧಿತ ನಾಮಫಲಕ ಅಳವಡಿಕೆ ಕಡ್ಡಾಯವಾಗಿದೆ. ಶಾಲೆಗಳ ಎದುರು ನಾಮಫಲಕ ಕಡ್ಡಾಯವಾಗಿದೆ. ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ಕನಿಷ್ಟ ರೂ. 200 ದಂಡ ವಿಧಿಸಲಾಗುವದು. ಪಿಡಿಓ ಈ ಬಗ್ಗೆ ಪರಿಶೀಲಿಸಿ ದಂಡ ವಿಧಿಸಬಹುದು. ಪೊಲೀಸರಿಗೂ ದಂಡ ವಿಧಿಸಲು ಅಧಿಕಾರವಿದೆ ಎಂದು ಹೇಳಿದರು.

ಈ ಸಂದರ್ಭ ಭಾಗಮಂಡಲ ಪೊಲೀಸ್ ಠಾಣಾಧಿಕಾರಿ ಸದಾಶಿವ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಅಶೋಕ, ಬಿಪಿನ್, ಹುಸೇನ್, ಗೀತಾಂಜಲಿ, ಡಾ. ಶಿವಕುಮಾರ್, ಭಾಗಮಂಡಲ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್‍ಕುಮಾರ್, ಕಂದಾಯ ಅಧಿಕಾರಿ ವೆಂಕಟೇಶ್, ಪೊಲೀಸ್ ಇಲಾಖೆಯ ಹರೀಶ್, ನಂಜುಂಡ, ಉದಯ್, ವಸಂತ್, ಶಿವರಾಮ್, ಜಯಪ್ರಕಾಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.