ಮಡಿಕೇರಿ, ಮೇ 30: ಕೊಡಗು ಜಿಲ್ಲೆಯಲ್ಲಿ ನೂರಾರು ಸರಕಾರಿ ಶಾಲೆಗಳು ಹಿರಿಯರ ಆಶಯದಂತೆ ಒಂದೊಮ್ಮೆ, ಗ್ರಾಮ ಗ್ರಾಮಗಳಲ್ಲಿ ಸ್ಥಾಪನೆಗೊಂಡಿದ್ದವು. ಇಂದು ಹಿರಿಯರ ಕನಸುಗಳು ಭಗ್ನಗೊಂಡು ಅಂತಹ ಅದೆಷ್ಟೋ ಶಾಲೆಗಳು ವರ್ಷದಿಂದ ವರ್ಷಕ್ಕೆ ಬಾಗಿಲು ಹಾಕಿಕೊಳ್ಳುತ್ತಿವೆ.
ಹಿಂದೆ ಊರಿಗೊಂದು ಶಾಲೆ ಹಾಗೂ ದೇವಾಲಯಕ್ಕಾಗಿ ಅನೇಕ ಹಿರಿಯರು ತಮ್ಮ ಜಾಗವನ್ನು ಕೊಡಗಿನ ಉದ್ದಗಲಕ್ಕೂ ಬಿಟ್ಟುಕೊಟ್ಟಿದ್ದರು. ಅಲ್ಲಲ್ಲಿ ಕಟ್ಟಡಗಳು ನಿರ್ಮಾಣಗೊಂಡು ತಮ್ಮ ಹುಟ್ಟೂರು ಗಳಲ್ಲಿಯೇ ಪುಟಾಣಿಗಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದರು.
ಹಿಂದಿನ ಗುರುಕುಲ ಪದ್ಧತಿ ಯಂತೆ ಆ ದಿನಗಳಲ್ಲಿ ಮಕ್ಕಳಿಗೆ ಆಟ-ಪಾಠದ ಜೊತೆಗೆ ನೀತಿ ಶಿಕ್ಷಣ, ಕಲೆ, ಗಾಯನ, ಜೀವನ ಮೌಲ್ಯಗಳನ್ನು ಕಲಿಸುವ ಶಿಕ್ಷಕರು ನಿಯೋಜನೆ ಗೊಳ್ಳುತ್ತಿದ್ದರು. ಇಡೀ ಊರಿನ ಜನ ಒಗ್ಗೂಡಿ ತಮ್ಮ ಮಕ್ಕಳು ಕಲಿಯುವ ಶಾಲೆಯ ವಾರ್ಷಿಕೋತ್ಸವ, ಕ್ರೀಡಾಕೂಟಗಳನ್ನು ಜಾತ್ರೆಯಂತೆ ಆಚರಿಸುತ್ತಿದ್ದರು.
ಗ್ರಾಮೀಣ ಜೀವನಕ್ಕೆ ಹೊಂದಿ ಕೊಳ್ಳುವ ಚಟುವಟಿಕೆಗಳಿಗೆ ಪ್ರೇರಣೆ ಸಿಗುತ್ತಿತ್ತು. ಹಿರಿಯರ ವೃತ್ತಿಜೀವನದಲ್ಲಿ ಮಕ್ಕಳು ತೊಡಗಿಸಿಕೊಂಡು ಕುಲ ಕಸುಬುಗಳನ್ನು ತಾವು ಗೌರವಿಸುತ್ತಾ ಬೆಳೆಯುತ್ತಿದ್ದರು.
ಇಂದು ಕಾಲ ಬದಲಾಗಿದೆ. ಜನ ಹಳ್ಳಿ ಜೀವನದಿಂದ ವಿಮುಖರಾಗಿ ಪಟ್ಟಣ, ಮಹಾನಗರಗಳ ಕಡೆ ಮುಖ ಮಾಡಿದ್ದಾರೆ. ತಮ್ಮ ಮಕ್ಕಳನ್ನು ಇಂಗ್ಲೀಷ್ ಮೋಹಕ್ಕೆ ತಳ್ಳಿ ದುಬಾರಿ ಶುಲ್ಕದೊಂದಿಗೆ ಖಾಸಗಿ ಶಾಲೆಗಳಿಗೆ ಸೇರಿಸತೊಡಗಿದ್ದಾರೆ. ಅದೊಂದು ಪ್ರತಿಷ್ಠೆಯೇ ಆಗಿಬಿಟ್ಟಿದೆ.
ಪರಿಣಾಮ ಗ್ರಾಮೀಣ ಸರಕಾರಿ ಶಾಲೆಗಳು ಇಂದು ಮುಚ್ಚಿ ಹೋಗುತ್ತಿವೆ. ಕಾರಣ ಮಕ್ಕಳ ಸಂಖ್ಯೆ ಕುಸಿತ, ಹಿಂದೆ ಒಂದೊಂದು ಮನೆಗಳಲ್ಲಿ ನಾಲ್ಕಾರು ಮಕ್ಕಳು ಇರುತ್ತಿದ್ದರೆ, ಈಗಿನ ಪರಿಸ್ಥಿತಿಯಲ್ಲಿ ಒಂದೆರಡು ಮಕ್ಕಳು ಕಾಣಸಿಗುವದೇ ಅಪರೂಪ. ಒಂದೊಮ್ಮೆ ಜಿಲ್ಲೆಯ ಗ್ರಾಮೀಣ ಶಾಲೆಗಳಲ್ಲಿ ಕೊಠಡಿ ತುಂಬ ಮಕ್ಕಳಿದ್ದು, ಮೈದಾನ ತುಂಬಿ ಆಟವಾಡುತ್ತಿದ್ದ ದೃಶ್ಯ ಎದುರಾಗು ತ್ತಿತ್ತು. ಇಂದು ಚಿತ್ರಣ ಬದಲಾಗಿದೆ. ಹಳ್ಳಿ ಶಾಲೆಗಳು ಬಿಕೋ ಎನ್ನುತ್ತಿದ್ದು, ವರ್ಷದಿಂದ ವರ್ಷಕ್ಕೆ ಒಂದೊಂದಾಗಿ ಬಾಗಿಲು ಮುಚ್ಚಿಕೊಂಡಿರುವದು ಬಯಲಾಗತೊಡಗಿದೆ.
ಮಡಿಕೇರಿ ತಾಲೂಕಿನ ದೇವಸ್ತೂರು, ವಣಚಲು, ಹಚ್ಚಿನಾಡು ಮೊದಲಾದೆಡೆ ಅನೇಕ ವರ್ಷಗಳ ಹಿಂದೆಯೇ ಕಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿಹೋಗಿವೆ. ಕಳೆದ ವರ್ಷ ಹಮ್ಮಿಯಾಲ ಸರಕಾರಿ ಶಾಲೆಯನ್ನು ಮುಚ್ಚಲಾಗಿದೆ. ಇನ್ನು ಸೋಮವಾರಪೇಟೆ ತಾಲೂಕಿನ ಕಿಕ್ಕರಳ್ಳಿ, ಗರ್ವಾಲೆಯಲ್ಲಿನ ಪ್ರೌಢಶಾಲೆ ಈ ಹಿಂದೆಯೇ ಬಾಗಿಲು ಬಂದ್ ಆಗಿದ್ದು, ಹಂಡ್ಲಿ ಹಾಗೂ ಶಾಂತಳ್ಳಿ ಪ್ರಾಥಮಿಕ ಶಾಲೆಗಳು ಮುಚ್ಚಿ ಶೂನ್ಯ ಶಾಲೆಗಳೆಂದು ಘೋಷಿಸಲ್ಪಟ್ಟಿವೆ.
ಪ್ರಸಕ್ತ ವರ್ಷದಲ್ಲಿ ತೋಳೂರು ಶೆಟ್ಟಳ್ಳಿ, ಬಾಚಳ್ಳಿ, ಅಬ್ಬಿಮಠ ಶಾಲೆಗಳು ಮಕ್ಕಳಿಲ್ಲದೆ ಮುಚ್ಚು ವಂತಾದರೆ, ಹಿಂದಿನ ಸಾಲಿನಲ್ಲಿ ಹಂಡ್ಲಿ ವ್ಯಾಪ್ತಿಯ ಮನಗಳ್ಳಿ ಹಾಗೂ ಕೂತಿಯ ಸರಕಾರಿ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ.
ಇನ್ನು ನಾಲ್ಕೈದು ವರ್ಷಗಳಲ್ಲಿ ಮಾಯಮುಡಿ ಮರಿಯಮ್ಮನ ಕಾಲೋನಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಬಾಳೆಲೆ ಕೊಲ್ಲಿ ಹಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವೀರಾಜಪೇಟೆ ತಾಲೂಕಿನಲ್ಲಿ ಮುಚ್ಚಿದ್ದು, ಕುಂಜಿಲಗೇರಿ ಹಾಗೂ ಗೋಣಿಕೊಪ್ಪಲು ಪ್ರಾಥಮಿಕ ಶಾಲೆಯು 2014ರಲ್ಲಿ ಮುಚ್ಚಲ್ಪಟ್ಟಿವೆ. ಅಲ್ಲದೆ, ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ಪ್ರಾಥಮಿಕ ಶಾಲೆ ಮತ್ತು ಭಗವತಿನಗರ ಶಾಲೆಯೊಂದು ಮುಚ್ಚಿರುವ ಬಗ್ಗೆ ತಿಳಿದು ಬಂದಿದೆ.
ಸರಕಾರಿ ಶಾಲೆಗಳು ಕೆಲವೆಡೆ ಮಕ್ಕಳಿಲ್ಲದೆ ನಿಂತು ಹೋಗುತ್ತಿದ್ದರೆ, ಇನ್ನೊಂದೆಡೆ ಆಂಗ್ಲ ಮೋಹದಿಂದ ಗ್ರಾಮೀಣ ಮಂದಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕುಲಕಸುಬು ಬಿಟ್ಟು ಪೇಟೆಯತ್ತ ವಲಸೆ ಬರುತ್ತಿರುವದು ಸಮಸ್ಯೆಯ ಮೂಲವಾಗಿದೆ.
ಸರಕಾರ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸರಕಾರಿ ಶಾಲೆಗಳಲ್ಲಿ ಸಾಕಷ್ಟು ಅನುಕೂಲ ಕಲ್ಪಿಸಿದ್ದರೂ, ಖಾಸಗಿ ಆಂಗ್ಲ ಭಾಷಾ ಮೋಹದಿಂದ ಅಂತಹ ಯೋಜನೆಗಳು ಅಲ್ಪ ಪ್ರಮಾಣದಲ್ಲಿ ಹೊಂದಿಕೊಳ್ಳುವವರು ಮಾತ್ರ ಕಾಣಬರುತ್ತಿದ್ದಾರೆ. ಇದೊಂದು ಆತಂಕಕಾರಿ ಬೆಳವಣಿಗೆ.
-ಶ್ರೀಸುತ