ಮಡಿಕೇರಿ, ಮೇ 30: ಮಹಿಳೆಯೋರ್ವಳನ್ನು ಕೊಲೆ ಮಾಡಿದ ಆರೋಪಕ್ಕಾಗಿ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ವಿಧಿಸಿದೆ.ಗೊಂದಿಬಸವನ ಹಳ್ಳಿ ಗ್ರಾಮದ ಹೆಚ್.ಕೆ. ತನಿಯಪ್ಪ ಎಂಬವರ ಪುತ್ರ ಜಿ.ಟಿ. ಜಾನ್ಸನ್ ಯಾನೆ ಜಾನಿ ವಿಚ್ಛೇದಿತ ಮಹಿಳೆ ಕವಿತಾ ಎಂಬಾಕೆಯೊಂದಿಗೆ 10 ವರ್ಷಗಳ ಕಾಲ ವಾಸವಿದ್ದು, ಬಳಿಕ ಉಮಾ ಎಂಬಾಕೆಯೊಂದಿಗೆ ವಾಸವಿದ್ದನು. ಕವಿತಾ ಮತ್ತು ಜಾನ್ಸನ್ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಈ ಬಗ್ಗೆ ಕವಿತಾ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ದ್ವೇಷದಿಂದ ಮತ್ತು ಜಾನ್ಸನ್ ಉಮಾಳೊಂದಿಗೆ ವಾಸವಾಗಿರಲು ಕವಿತಾಳು ವಿರೋಧಿಸುತ್ತಿದ್ದುದರಿಂದ ಅಲ್ಲದೇ ಜಾನ್ಸನ್ ಸಹೋದರ ಆರೋಪಿ ಜಗ ಜಿ.ಟಿ., ಈತನೊಂದಿಗೂ ಸಹಾ ಕವಿತಾ ಜಗಳವಾಡುತ್ತಿದ್ದು, ದಿನಾಂಕ 19.1.2016 ರಂದು ರಾತ್ರಿ 8.30 ಗಂಟೆಗೆ ಜಗ ಜಿ.ಟಿ. ಮನೆಯ ಮುಂದಿನ ಕಾಲುದಾರಿಯಲ್ಲಿ ಕವಿತಾ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಜಗ ಮತ್ತು ಆರೋಪಿ ಜಾನ್ಸನ್ ಸೇರಿಕೊಂಡು ಕವಿತಾಳೊಂದಿಗೆ ಜಗಳ ತೆಗೆದು, ಜಾನ್ಸನ್ ಕವಿತಾಳೊಂದಿಗೆ ಜಗಳ ಮಾಡುತ್ತಿದ್ದಾಗ, ಜಗ ಮನೆಯೊಳಗೆ ಹೋಗಿ ಕತ್ತಿ ಮತ್ತು ಜಾನ್ಸನ್ ನೈಲಾನ್ ಹಗ್ಗ ತೆಗೆದುಕೊಂಡು ಬಂದಿದ್ದು, ಕವಿತಾ ಮನೆಯ ಕಡೆಗೆ ಓಡಿದಾಗ ಕವಿತಾಳನ್ನು ಹಿಂಬಾಲಿಸಿಕೊಂಡು ಹೋಗಿ, 1/1ರ ಮೀಸಲು ಅರಣ್ಯಕ್ಕೆ ಸೇರಿದ ಖಾಲಿ
(ಮೊದಲ ಪುಟದಿಂದ) ಜಾಗದಲ್ಲಿ ಕವಿತಾಳನ್ನು ಅಡ್ಡಗಟ್ಟಿ ಜಗ ಕತ್ತಿಯಿಂದ ಕವಿತಾಳ ಕುತ್ತಿಗೆಗೆ ಮತ್ತು ಮುಖದ ಎಡಗಲ್ಲದ ಭಾಗಕ್ಕೆ ಕಡಿದಿದ್ದು, ಕವಿತಾಳು ನೆಲಕ್ಕೆ ಬಿದ್ದಾಗ ಜಾನ್ಸನ್ ನೈಲಾನ್ ಹಗ್ಗದಿಂದ ಕವಿತಾಳ ಕುತ್ತಿಗೆಗೆ ಬಿಗಿದು ಅವಳನ್ನು ಕೊಲೆ ಮಾಡಿರುವದಾಗಿ ನೀಡಲಾದ ದೂರಿನ ಮೇರೆಗೆ ಪ್ರಕರಣವನ್ನು ಕುಶಾಲನಗರ ಠಾಣಾ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಗರದ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಡಿ.ಪವನೇಶ್ ನಡೆಸಿದ್ದು, ಸಾಕ್ಷಿಗಳ ವಿಚಾರಣೆಯಿಂದ ಆರೋಪಿಗಳು ಕವಿತಾಳನ್ನು ಕೊಲೆ ಮಾಡಿರುವದು ಸಾಬೀತಾಗಿದೆ ಎಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ತೀರ್ಪಿನಲ್ಲಿ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ಅನುಭವಿಸುವಂತೆಯೂ ಹಾಗೂ ತಲಾ ರೂ. 15,000 ದಂಡವನ್ನು ಪಾವತಿಸುವಂತೆಯೂ ತಿಳಿಸಲಾಗಿದೆ. ಪ್ರಕರಣದ ಬಗ್ಗೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದ ಮಂಡಿಸಿದರು.