ಸೋಮವಾರಪೇಟೆ, ಮೇ 31: ಮಹಿಳೆಯರೂ ಸೇರಿದಂತೆ ಜನಸಾಮಾನ್ಯರಲ್ಲಿ ವ್ಯಾವಹಾರಿಕ ಜ್ಞಾನವನ್ನು ವೃದ್ಧಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಐಡಿಬಿಐ ಬ್ಯಾಂಕ್‍ನ ಜಿಲ್ಲಾ ವ್ಯವಸ್ಥಾಪಕ ವಿಶಾಲ್ ಬಣ್ಣಿಸಿದರು.
ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಒಕ್ಕೂಟ ಅಧ್ಯಕ್ಷರುಗಳ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ಹಲವು ದಶಕಗಳಿಂದ ಸರಕಾರ ಸಾಧಿಸದ ಸಾಧನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ಕೆಲವೇ ವರ್ಷಗಳಲ್ಲಿ ಮಾಡಿರುವದು ಶ್ಲಾಘನೀಯ ಎಂದರು.
ಸಭೆಯನ್ನು ಉದ್ಘಾಟಿಸಿದ ಭಾರತ್ ಸ್ಕೌಟ್ ಮತ್ತು ಗೈಡ್ಸ್‍ನ ತಾಲೂಕು ಸಂಸ್ಥೆ ಅಧ್ಯಕ್ಷ ಬಿ.ಎ. ಭಾಸ್ಕರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿ, ಬ್ಯಾಂಕಿಂಗ್, ಶಿಕ್ಷಣ, ಪರಿಸರ, ಜಲಸಂಪನ್ಮೂಲಗಳ ಬಗ್ಗೆಯೂ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಯೋಜನೆಯು ತಾಲೂಕಿನಲ್ಲಿ 21,206 ಸದಸ್ಯರನ್ನು ನೋಂದಾಯಿಸಿಕೊಳ್ಳುವ ಮೂಲಕ ಸಮುದಾಯಗಳ ಅಭಿವೃದ್ಧಿಯಲ್ಲಿ ತೊಡಗಿದೆ ಎಂದರು.
ಸಭೆಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಸೀತಾರಾಮ್ ಶೆಟ್ಟಿ, ಭಾರತೀಯ ಜೀವ ವಿಮಾ ನಿಗಮದ ಮೈಸೂರು ವ್ಯವಸ್ಥಾಪಕ ಸೊಲ್ಲೇಶ್, ಐಡಿಬಿಐ ಬ್ಯಾಂಕ್‍ನ ಜಿಲ್ಲಾ ಸಹಾಯಕ ಅಧಿಕಾರಿ ಕೊಟ್ರೇಶ್, ಎನ್‍ಆರ್‍ಎಲ್‍ಎಂನ ಸಮನ್ವ ಯಾಧಿಕಾರಿ ರಾಜೇಶ್, ಮೇಲ್ವಿಚಾರಕ ರಮೇಶ್ ಸೇರಿದಂತೆ ತಾಲೂಕಿನ ವಲಯಗಳ ಮೇಲ್ವಿಚಾರಕರುಗಳು ಉಪಸ್ಥಿತರಿದ್ದರು.