ಮಡಿಕೇರಿ, ಮೇ 30: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 2 ಕ್ಷೇತ್ರಗಳಿಗೆ ಬಿಜೆಪಿಯಿಂದ ಶಾಸಕರುಗಳಾದ ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳೇ ಅಭ್ಯರ್ಥಿಗಳಾಗುತ್ತಾರೆ ಎಂಬದನ್ನು ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.ನಗರದ ಬಾಲಭವನದಲ್ಲಿ ನಡೆದ ಮಡಿಕೇರಿ ನಗರ ಬಿಜೆಪಿ ಕಾರ್ಯ ಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ನರೇಂದ್ರ ಮೋದಿ ಸರ್ಕಾರ ಯಾವದೇ ಕಪ್ಪು ಚುಕ್ಕೆಯಿಲ್ಲದೆ, ಯಶಸ್ವಿ 3 ವರ್ಷಗಳನ್ನು ಪೂರೈಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರವಿದ್ದು, ದಕ್ಷ ಅಧಿಕಾರಿಗಳು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಡಿವೈಎಸ್ಪಿ ಗಣಪತಿ, ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಪ್ರಕರಣಗಳೇ ಸಾಕ್ಷಿಯಾಗಿವೆ ಎಂದ ಅವರು, ಡಿಸೆಂಬರ್ನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರದಿಂದ ಸಾಕಷ್ಟು ಅನುದಾನಗಳು ರಾಜ್ಯಕ್ಕೆ ಬಂದಿವೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಕೇಂದ್ರದ ಅನುದಾನವನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ. 2018ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ 150 ಸೀಟ್ ಗೆಲ್ಲುವದು ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಕನಸಾಗಿದ್ದು, ಎಲ್ಲರೂ
(ಮೊದಲ ಪುಟದಿಂದ) ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಪಕ್ಷದ ಕಾರ್ಯಕರ್ತರು ಕನಿಷ್ಟ 15 ದಿನ ಮನೆಮನೆಗೆ ತೆರಳಿ ಕೇಂದ್ರದ ಜನಪರ ಕಾರ್ಯಕ್ರಮ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಮಾಹಿತಿ ನೀಡಬೇಕೆಂದು ತಿಳಿಸಿದ ಅವರು, ಪಕ್ಷದ ವಿಚಾರದಲ್ಲಿ ವೈಯಕ್ತಿಕ ದ್ವೇಷಗಳು ಬೇಡ. ಕಾರ್ಯಕರ್ತರು ಅಸಮಾಧಾನದಿಂದ ಮಾಧ್ಯಮಗಳಿಗೆ ಹೇಳಿಕೆ ನೀಡುವ ಬದಲು ಪಕ್ಷದ ಭಿನ್ನಾಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಮತ್ತು ಶ್ಯಾಂಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚಣೆಗೈದು ಗೌರವ ಸಮರ್ಪಿಸಿದರು.
ಬಿಜೆಪಿ ನಗರ ಸಮಿತಿ ಅಧ್ಯಕ್ಷ ಮಹೇಶ್ ಜೈನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.