ಸೋಮವಾರಪೇಟೆ, ಮೇ 30: ಕಾಳಿಂಗ ಸರ್ಪದ ವಿಷವನ್ನು ಸಂಗ್ರಹಿಸಿ ಲಕ್ಷಾಂತರ ರೂಪಾಯಿ ಗಳಿಗೆ ಮಾರಾಟ ಮಾಡುವ ಜಾಲ ಸೋಮವಾರಪೇಟೆಯಲ್ಲಿ ಸಕ್ರಿಯವಾಗಿದೆಯೇ? ಎಂಬ ಸಂಶಯ ಇದೀಗ ಮೂಡಿದೆ. ನಿನ್ನೆ ದಿನ ಸರ್ಪದ ವಿಷವನ್ನು ಮಾರಾಟ ಮಾಡುತ್ತಿದ್ದ ಸೋಮವಾರಪೇಟೆ ಸಮೀಪದ ಯಡೂರು ಗ್ರಾಮದ ವ್ಯಕ್ತಿಯನ್ನು ಮೈಸೂರಿನಲ್ಲಿ ಬಂಧಿಸಿದ ನಂತರ ಈ ಸಂಶಯಕ್ಕೆ ಮತ್ತಷ್ಟು ಪುಷ್ಟಿ ಬಂದಿದೆ.

ಸಮೀಪದ ಯಡೂರು ಗ್ರಾಮದ ನಿವಾಸಿ ನಾರಾಯಣ ಅವರ ಪುತ್ರ ರಾಜು (40) ಎಂಬಾತನನ್ನು ನಿನ್ನೆ ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದ ಮುಂಭಾಗವಿರುವ ಗಿರಿಯಾಸ್ ಶೋ ರೂಂ ಎದುರು ಕಾಳಿಂಗ ಸರ್ಪದ ವಿಷ ಸಹಿತ ಅರಣ್ಯ ಸಂಚಾರಿ ದಳದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಈತ ಯಡೂರಿನಲ್ಲಿ ಈ ಹಿಂದೆ ಟಿಂಬರ್ ಮರದ ಕೆಲಸ ನಿರ್ವಹಿಸುತ್ತಿದ್ದು, ಮರಬಿದ್ದು ಕಾಲಿಗೆ ಪೆಟ್ಟಾದ ನಂತರ ಕೆಲಸಕ್ಕೆ ಹೋಗದೇ ಇಂತಹ ಕೃತ್ಯದಲ್ಲಿ ತೊಡಗಿದ್ದುದು ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದು, ಈತನೊಂದಿಗೆ ಇರುವ ಕಾಣದ ಕೈಗಳಿಗಾಗಿ ಮೈಸೂರಿನ ಅರಣ್ಯ ಸಂಚಾರಿ ದಳದ ಸಿಐಡಿ ಪೊಲೀಸರು ಸೋಮವಾರಪೇಟೆಗೆ ಆಗಮಿಸುವ ಸಾಧ್ಯತೆಯಿದೆ.

ಮೈಸೂರಿನಲ್ಲಿ ವಿಷವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಖಚಿತ ಸುಳಿವಿನ ಮೇರೆ ಧಾಳಿ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ನಂತರ ಜ್ಯೋತಿ ನಗರದಲ್ಲಿರುವ ಪೊಲೀಸ್ ಅರಣ್ಯ ಸಂಚಾರಿ ದಳದ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ ಸಂದರ್ಭ, ತಾನು 2 ವರ್ಷದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ.

ನಿನ್ನೆ ದಿನ ಸ್ನೇಹಿತನೊಬ್ಬ ಸಂಪರ್ಕಿಸಿ ಕಾಳಿಂಗ ಸರ್ಪದ ವಿಷವಿದ್ದು, ಇದನ್ನು 20 ಲಕ್ಷಕ್ಕೆ ಮಾರಾಟ ಮಾಡಿಕೊಟ್ಟರೆ ನಿನಗೂ ಪಾಲು ನೀಡುತ್ತೇನೆ ಎಂದು ಹೇಳಿದರು. ತನಗೂ ಹಣದ ಅವಶ್ಯಕತೆಯಿದ್ದುದರಿಂದ ಕಾಳಿಂಗ ಸರ್ಪದ ವಿಷವನ್ನು ಪಡೆದು ಮಾರಾಟ ಮಾಡಲು ಮೈಸೂರಿಗೆ ಬಂದಿದ್ದಾಗಿ ಒಪ್ಪಿಕೊಂಡಿದ್ದಾನೆ.

ಧಾಳಿಯಲ್ಲಿ ಮೈಸೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕ ಎನ್.ಪಿ. ಹರೀಶ್, ಸಿಬ್ಬಂದಿಗಳಾದ ಎಂ.ಬಿ. ರಮೇಶ್, ವೆಂಕಟಾಚಲಯ್ಯ, ನರಸಿಂಹಮೂರ್ತಿ, ಟಿ.ಆರ್. ರಘು, ಚೆÀಲುವರಾಜು, ಎಲ್. ಮಂಜುನಾಥ್, ಪ್ರದೀಪ್ ಅವರುಗಳು ಪಾಲ್ಗೊಂಡಿದ್ದರು.

ಆರೋಪಿ ರಾಜುವಿಗೆ ಕಾಳಿಂಗ ಸರ್ಪದ ವಿಷ ಹೇಗೆ ಸಿಕ್ಕಿತು? ಸುಮಾರು ರೂ. 50 ಲಕ್ಷದಷ್ಟು ಮೌಲ್ಯದ ವಿಷವನ್ನು ಸಂಗ್ರಹಿಸಿ ದ್ದಾದರೂ ಹೇಗೆ? ಸೋಮವಾರಪೇಟೆ ವ್ಯಾಪ್ತಿಯಲ್ಲಿರುವ ಹಾವಾಡಿಗರಿಂದ ವಿಷವನ್ನು ಸಂಗ್ರಹಿಸಿದ್ದಾನೆಯೇ? ವಿಷವನ್ನು ಯಾರಿಗೆ ಮಾರಾಟ ಮಾಡುತ್ತಿದ್ದ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಪೊಲೀಸ್ ತನಿಖೆ ಮುಂದುವರೆದಿದೆ.

‘ಕಾಳಿಂಗ ಸರ್ಪದ ವಿಷವನ್ನು ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾರಾಟ ಮಾಡುತ್ತಿದ್ದೆ’ ಎಂದು ಆರೋಪಿ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಈತನ ಹಿಂದೆ ಕಾಳಿಂಗ ಸರ್ಪದ ವಿಷ ಮಾಫಿಯಾ ಕಾರ್ಯನಿರ್ವಹಿಸುತ್ತಿದೆಯೇ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.