ಮಡಿಕೇರಿ, ಮೇ 31: ಜಿಲ್ಲೆಯಲ್ಲಿ ರೈತಾಪಿ ವರ್ಗದವರಿಗೆ ಅರಣ್ಯ ಇಲಾಖೆಯಿಂದ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿರುವ ಆರೋಪದ ನಡುವೆ ಇದೀಗ ಮತ್ತೊಂದು ಅಡಚಣೆ ಉಂಟಾಗಿದೆ. ಮನೆ ಕಟ್ಟಲು, ದನದ ಕೊಟ್ಟಿಗೆ, ಸೌದೆ ಕೊಟ್ಟಿಗೆಯಂತಹ ಅಗತ್ಯತೆಗಳಿಗಾಗಿ ಸ್ವಂತ ಉಪಯೋಗಕ್ಕೆ ಮರ ಕಡಿಯಲು ಅರ್ಜಿ ಸಲ್ಲಿಸಿರುವ ರೈತರ ಕಡತ ಗಳನ್ನು ವಿಲೇವಾರಿ ಮಾಡದಿರುವ ಕುರಿತು ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ವಂತ ಉಪಯೋಗಕ್ಕೆ ಮರ ಕಡಿಯಲು ಅನುಮತಿಗೆ ಕೋರಿ ಹಲವು ಸಮಯ ಕಳೆದಿದ್ದರೂ ಈತನಕ ಸಂಬಂಧಿಸಿದ ಡಿ.ಎಫ್.ಓ. ಇದಕ್ಕೆ ಸಹಿ ಮಾಡಿಲ್ಲ. ಈ ಅನುಮತಿ ನೀಡಲು ಮೇ 31 ಮಾತ್ರ ಕೊನೆಯ ದಿನವಾಗಿದೆ. ಇನ್ನು ಅಕ್ಟೋಬರ್ ಬಳಿಕವಷ್ಟೇ ಅನುಮತಿ ನೀಡುವ ನಿಯಮ ಅರಣ್ಯ ಇಲಾಖೆಯಲ್ಲಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಅರಣ್ಯ ಭವನಕ್ಕೆ ಅಲೆದಾಡಿದರೂ ಡಿ.ಎಫ್.ಓ. ಸೂರ್ಯಸೇನ್ ಅವರು ಕಚೇರಿಯಲ್ಲಿ ಸಿಗುತ್ತಿಲ್ಲ. ನಿನ್ನೆ ಅಪರಾಹ್ನದ ತನಕ ಕಚೇರಿಯಲ್ಲಿದ್ದರೂ ಯಾವದೇ ಕಡತಗಳನ್ನು ಮುಟ್ಟಿಲ್ಲ. ಅನುಮತಿ ನೀಡಲು ಕೊನೆಯ ದಿನವಾಗಿದ್ದ ಮೇ 31ರಂದು ಈ ಅಧಿಕಾರಿ ಕಚೇರಿಯತ್ತ ಸುಳಿಯಲೇ ಇಲ್ಲ. ಸಂಪರ್ಕಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬದಲಿಗೆ ಈ ದಿನ ಕಚೇರಿಗೆ ಬರುವದಿಲ್ಲ ಎಂಬ ಉತ್ತರ ದೊರೆತಿದೆ

(ಮೊದಲ ಪುಟದಿಂದ) ಎಂದು ಅನುಮತಿಗಾಗಿ ಅಲೆದಾಡಿರುವ ಜನರು ‘ಶಕ್ತಿ'ಯೊಂದಿಗೆ ಅಳಲು ತೋಡಿಕೊಂಡರು. ಈ ಹಿಂದೆ ಅವರೊಂದಿಗೆ ಚರ್ಚಿಸಿದ ಸಂದರ್ಭ ‘ನಿಮಗೆ ಮರ ಕಡಿಯಲು ಅನುಮತಿ ನೀಡಿದರೆ ತಮಿಳುನಾಡಿಗೆ ನೀರು ಎಲ್ಲಿಂದ ಸಿಗಲಿದೆ' ಎಂಬ ಹಾರಿಕೆಯ ಉತ್ತರ ದೊರೆತಿರುವದಾಗಿಯೂ ಸಾಕಷ್ಟು ಸಂಖ್ಯೆಯಲ್ಲಿ ಅರಣ್ಯ ಭವನದಲ್ಲಿ ಕಾದು ನಿಂತಿದ್ದ ಅಮಾಯಕ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಮಳೆ ಆರಂಭವಾಗಲಿದ್ದು, ಅರ್ಧದಲ್ಲಿ ನಿಂತಿರುವ ಕೆಲಸ ಪೂರೈಸುವದಾದರೂ ಹೇಗೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ರೈತರುಗಳಾದ ಮಂಞÂೀರ ಉಮೇಶ್ ಅಪ್ಪಣ್ಣ, ಜಗದೀಪ್, ಕೆ.ಎಸ್. ಮನೋಹರ, ಪಾಂಡಂಡ ಶಾರದ ನಂಜಪ್ಪ, ಕೆ.ಯು. ಸುಬ್ಬಯ್ಯ, ಕೆ.ಎಂ. ಭರತ್, ಹೆಚ್.ಸಿ. ಕುಟ್ಟಪ್ಪ, ಮಣಿಗೌಂಡರ್ ಮತ್ತಿತರರು ಸಮಸ್ಯೆ ಬಗ್ಗೆ ಮಾಹಿತಿಯಿತ್ತರು.