ಶ್ರೀಮಂಗಲ-ಪೊನ್ನಂಪೇಟೆ, ಮೇ 31: ಹಲವು ದಶಕಗಳಿಂದ ಕೇವಲ ಮತದಾರರಾಗಿಯೇ ಉಳಿದಿರುವ ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಸೂಕ್ತವಾದ ರಾಜಕೀಯ ಸ್ಥಾನಮಾನ ದೊರೆಯಬೇಕಿದೆ. ಈ ಕಾರಣದಿಂದಾಗಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಅರ್ಹ ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡಿ ಶಾಸನ ಸಭೆಯ ಸದಸ್ಯರಾಗಲು ಅವಕಾಶ ಕಲ್ಪಿಸಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ) ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಕೆ.ಎಂ.ಎ ಹಿರಿಯ ಉಪಾಧ್ಯಕ್ಷ ಆಲೀರ ಎ.ಅಹಮ್ಮದ್ ಹಾಜಿ ಜಿಲ್ಲೆಯ ಮುಸ್ಲಿಂಮರಲ್ಲಿ ಬಹುಪಾಲು ಜನರು ಕಾಂಗ್ರೆಸನ್ನು ಬೆಂಬಲಿಸುತ್ತಿದ್ದು, ಪಕ್ಷದ ಅಸ್ತಿತ್ವವನ್ನು ಕಾಪಾಡಿಕೊಳ್ಳುವಲ್ಲಿ ತಮ್ಮದೇ ಆದ ರೀತಿಯಲ್ಲಿ ಶ್ರಮ ವಹಿಸಿದ್ದಾರೆ. ಆದರೆ ಇದುವರೆಗೂ ಸೂಕ್ತ ರಾಜಕೀಯ ಸ್ಥಾನಮಾನ ದೊರೆತಿಲ್ಲ. ಒಂದು ಸಮುದಾಯ ಸಾಮಾಜಿಕವಾಗಿ ಪ್ರಗತಿ ಹೊಂದಬೇಕಾದರೆ ರಾಜಕೀಯ ಸ್ಥಾನಮಾನದ ಅಗತ್ಯತೆ ಇರುವದರಿಂದ ಈ ಬಾರಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಯೊಬ್ಬರನ್ನು ಪಕ್ಷದ ಹೈಕಮಾಂಡ್ ಪರಿಗಣಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ವ್ಯಾಪ್ತಿಯಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದು, ಇದುವರೆಗೂ ಕಾಂಗ್ರೆಸ್ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳಲ್ಲಿ ಕ್ಷೇತ್ರದ ಮುಸ್ಲಿಂ ಮತದಾರರ ಮತಗಳು ಮಹತ್ವದ ಪಾತ್ರ ವಹಿಸಿದೆ ಎಂಬದನ್ನು ಮರೆಯಬಾರದು. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಇದುವರೆಗೂ ಮುಸ್ಲಿಂ ಅಭ್ಯರ್ಥಿ ಸ್ಪರ್ಧಿಸಿದ ಚರಿತ್ರೆ ಇಲ್ಲ. ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ನೆಲೆಗಟ್ಟಿನ ತತ್ವ ಹೊಂದಿದ್ದು, ಶೋಷಿತರಿಗೆ, ಹಿಂದುಳಿದವರಿಗೆ ಅಲ್ಪಸಂಖ್ಯಾತರಿಗೆ ಸೇರಿದಂತೆ ಸಮಾಜದಲ್ಲಿ ಧ್ವನಿಯಿಲ್ಲದವರ ಧ್ವನಿಯಾಗಿ ಎಲ್ಲರಿಗೂ ಸಮಾನವಾದ ರಾಜಕೀಯ ಸ್ಥಾನಮಾನ ಕೊಡಿಸುವಲ್ಲಿ ಸಫಲವಾಗಿದೆ. ಈ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರು ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ಪ್ರೀತಿಸುತ್ತಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಅರ್ಹ ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ವೀರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಅವರ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿಸುವಂತೆ ಆಲೀರ ಅಹಮ್ಮದ್ ಹಾಜಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.