ಶ್ರೀಮಂಗಲ, ಜೂ. 1: ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬವನ್ನು ಭೇಟಿ ಮಾಡಿದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಯೋಗಕ್ಷೇಮ ವಿಚಾರಿಸಿದರು.
ಪೌರ ಕಾರ್ಮಿಕರಿಗೆ ನಿಗದಿತ ಸಮಯಕ್ಕೆ ವೇತನ ಪಾವತಿ, ದೊರೆಯುತ್ತಿರುವ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಪೌರ ಕಾರ್ಮಿಕರು ತಮ್ಮ ಉದ್ಯೋಗವನ್ನು ಖಾಯಂಗೊಳಿಸುವಂತೆ ಸಿಇಓ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಸರಕಾರದ ನಿಯಮಾನುಸಾರ ಉದ್ಯೋಗ ಖಾಯಂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಕುಟ್ಟ ಗ್ರಾ.ಪಂ. ಕಚೇರಿಯ ಹಿಂಭಾಗದಲ್ಲಿ ಗ್ರಾ.ಪಂ. ವ್ಯಾಪ್ತಿಯ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದ್ದು, ಇದರ ಸಮೀಪದಲ್ಲೇ ಕೇಂದ್ರವಿದೆ. ಅಂಗನವಾಡಿಗೆ ತ್ಯಾಜ್ಯ ಕೊಳೆತು ನಾರುತ್ತಿರುವ ಹಾಗೂ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವ ಸಂದÀರ್ಭ ಹೊಗೆಯಿಂದ ಪರಿಸರ ಮಾಲಿನ್ಯ ಉಂಟಾಗಿದೆ. ಇದರಿಂದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯ ಸಾರ್ವಜನಿಕರು ಸಿಇಓ ಗಮನ ಸೆಳೆದರು.
ಈ ಸಮಸ್ಯೆ ಬಗೆಹರಿಸಲು ಸದ್ಯದಲ್ಲಿಯೇ ತ್ಯಾಜ್ಯಗಳನ್ನು ಇದೇ ಜಾಗದಲ್ಲಿ ದೊಡ್ಡ ಗುಂಡಿ ಮಾಡಿ ಭೂಮಿಯೊಳಗೆ ಹೂತು ಮೇಲ್ಭಾಗಕ್ಕೆ ಹಲವು ಅಡಿ ಮಣ್ಣು ಹಾಕಿ ಸುಂದರ ವಾದ ಹೂತೋಟ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳುವದಾಗಿ ಭರವಸೆ ನೀಡಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಪ್ರಕಾಶ್ ಉತ್ತಪ್ಪ, ಪಿಡಿಓ ಬಲರಾಮ್, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಕೃಷ್ಣ, ಗ್ರಾ.ಪಂ. ಸದಸ್ಯರಾದ ರೋಶಿಲಿ, ಸುನಿತಾ, ವಿಜಯ, ರುಕ್ಮಿಣಿ, ಮಾರ ಮತ್ತಿತರರು ಹಾಜರಿದ್ದರು.