ಶನಿವಾರಸಂತೆ, ಜೂ 1 : ಇತ್ತ ಮಗಳ ಮದುವೆ, ಅತ್ತ ಅಪ್ಪನ ಸಾವು, ಮದುವೆ ನಿಲ್ಲಿಸುವಂತಿಲ್ಲ. ಸಾವು ಮುಚ್ಚಿಡುವಂತಿಲ್ಲ. ಹೊಸ ಬದುಕಿನತ್ತ ಹೆಜ್ಜೆ ಇಡುವ ಮಗಳ ಮದುವೆ ಮುಖ್ಯವೆನಿಸಿ ತಂದೆ ಬಸವರಾಜ, ತಾಯಿ ಮುಹೂರ್ತಕ್ಕೆ ಸರಿಯಾಗಿ ಮಗಳನ್ನು ಧಾರೆಯೆರೆದು ಬಳಿಕ ತಂದೆಯ ಶವ ಸಂಸ್ಕಾರಕ್ಕೆ ಸಿದ್ದರಾದ ದುಃಖಕರ ಘಟನೆ ನಡೆದಿದೆ.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸುಮಿತ್ರಾದೇವಿ ಹಾಗೂ ಬಸವರಾಜ್ ದಂಪತಿಯೇ ಇಂತಹ ಪ್ರಸಂಗ ಎದುರಿಸಿದ ತಾಯಿ-ತಂದೆ. ಬೆಳಗಾದರೆ ಮಗಳ ಮದುವೆ ಸಂಭ್ರಮ, ಬೆಳಿಗ್ಗೆ 10.30ಕ್ಕೆ ಧಾರಾ ಮುಹೂರ್ತಕ್ಕೆ ಸ್ಥಳೀಯ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಸಿದ್ಧತೆ ಭರದಿಂದ ಸಾಗಿತ್ತು. ಅಡುಗೆ ಮನೆಯಲ್ಲಿ ವಿವಿಧ ಬಗೆಯ ಭಕ್ಷ್ಯಗಳು ತಯಾರಾಗುತ್ತಿದ್ದವು. ಕೆಟ್ಟ ಸುದ್ಧಿಯೊಂದು ಸಿಡಿಲಿನಂತೆ ಬಂದೆರಗಿತು. ಬಸವರಾಜ ಅವರ ತಂದೆ (ವಧುವಿನ ಅಜ್ಜ) ಶಕುನಮರಿ ಶೆಟ್ಟಿ (80) ಬೆಳಿಗ್ಗೆ 8:30ಕ್ಕೆ ಹೃದಯಾಘಾತದಿಂದ ನಿಧನರಾದರು. ಮಗಳ ಮದುವೆ ನಿಲ್ಲಸುವಂತ್ತಿಲ್ಲ. ಬಂಧು ಬಳಗದವರು ಸಮಾಲೋಚನೆ ನಡೆಸಿದರು. ಮೊದಲಿಗೆ ಮಂಗಳ ಕಾರ್ಯ ನೆರವೇರಿಸಿ ಬಳಿಕ ತಂದೆಯ ಅಂತ್ಯ ಸಂಸ್ಕಾರಕ್ಕೆ ಹೊರಟರು.