ಮಡಿಕೇರಿ, ಜೂ. 1: ಯಾವದೇ ಸಂದರ್ಭ ಅಪಘಾತಗಳು ಸಂಭವಿಸಿದರೆ, ಮೊದಲು ಗಾಯಾಳುವಿನ ಜೀವ ಉಳಿಸಲು ಪ್ರತಿಯೊಬ್ಬರು ಧಾವಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಕಿವಿಮಾತು ಹೇಳಿದ್ದಾರೆ. ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಇಂದು ಈ ಸಂಬಂಧ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾಹಿತಿ ನೀಡಿದರು.

ಗಾಯಾಳುವಿನ ಪ್ರಾಣ ಉಳಿಸಲು ಯಾರೇ ಮುಂದಾದರೂ ಅವರಿಗೆ ವೈದ್ಯರಿಂದ ಅಥವಾ ಪೊಲೀಸ್ ಇಲಾಖೆಯಿಂದ ಯಾವ ರೀತಿ ತೊಂದರೆ ಮಾಡುವದಿಲ್ಲವೆಂದು ಸ್ಪಷ್ಟಪಡಿಸಿದ ರಾಜೇಂದ್ರ ಪ್ರಸಾದ್, ಈ ಬಗ್ಗೆ ಜನವಲಯದಲ್ಲಿ ತಪ್ಪು ಭಾವನೆಯನ್ನು ದೂರ ಮಾಡಬೇಕಿದೆ ಎಂದರು.

ಕರ್ನಾಟಕದಲ್ಲಿ ಸರಾಸರಿ ದಿನಕ್ಕೆ 28 ಅಪಘಾತಗಳು ಸಂಭವಿಸುತ್ತಿದ್ದು, ದೇಶದಲ್ಲಿ 380ರಂತೆ ದುರಂತ ಎದುರಾತ್ತಿದೆ ಎಂದ ಅವರು, ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಅಂಕಿ ಅಂಶ ಸಹಿತ ವಿಷಾದ ವ್ಯಕ್ತಪಡಿಸಿದರು.

ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಪಘಾತಗಳಿಗೆ ಕಾರಣವಾಗುವ ಸಂಗತಿಗಳ ಸಾಕ್ಷ್ಯಚಿತ್ರ ಸಹಿತ ಮಾಹಿತಿ ನೀಡಿದ ಅವರು, ಸರ್ವೋಚ್ಛ ನ್ಯಾಯಾಲಯದ ಆದೇಶ ಪ್ರಕಾರ ಜೀವ ಉಳಿಸಲು ಕಾಳಜಿ ತೋರುವವರಿಗೆ ಕಾನೂನಿನಲ್ಲಿ ಎಲ್ಲಾ ರೀತಿ ರಕ್ಷಣೆಯಿದ್ದು, ತೊಂದರೆ ಕೊಡುವ ಯಾವ ಉದ್ದೇಶವಿರದೆಂದು ಸ್ಪಷ್ಟಪಡಿಸಿದರು.

ಸಂಚಾರಿ ನಿಯಮ ಉಲ್ಲಂಘಿಸುವದು, ಶಿರಸ್ತ್ರಾಣ (ಹೆಲ್ಮೆಟ್) ಧರಿಸದಿರುವದು, ಮೊಬೈಲ್ ಸಂಭಾಷಣೆಯೊಂದಿಗೆ ವಾಹನ ಚಾಲನೆ, ಮದ್ಯಪಾನ ಹಾಗೂ ಮಾದಕ ವಸ್ತುಗಳನ್ನು ಸೇವಿಸಿ ವಾಹನ ಓಡಿಸುವದರಿಂದ ಹೆಚ್ಚಿನ ಅಪಘಾತಗಳು ಸಂಭವಿಸಲಿವೆ ಎಂದು ರಾಜೇಂದ್ರ ಪ್ರಸಾದ್ ಬೊಟ್ಟು ಮಾಡಿದರು.

ಒಬ್ಬರ ಜೀವ ಉಳಿಸುವದಕ್ಕಾಗಿ ಮತ್ತು ಅಪಘಾತಗಳ್ನು ತಡೆಗಟ್ಟುವ ಸಲುವಾಗಿ ಪ್ರತಿಯೊಬ್ಬರು ಜಾಗ್ರತೆಯೊಂದಿಗೆ ಕಾಳಜಿ ವಹಿಸುವದು ಇಂದು ಎಲ್ಲರ ಹೊಣೆಯೆಂದ ಅವರು, ಈ ನಿಟ್ಟಿನಲ್ಲಿ ಸಮಾಜ ಹಾಗೂ ಯುವ ಜನಾಂಗದಲ್ಲಿ ಜಾಗೃತಿ ಅತ್ಯಗತ್ಯವೆಂದು ನೆನಪಿಸಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಮಹೇಂದ್ರ, ಡಾ. ವಸಂತ್, ಡಾ. ಕರಿಯಪ್ಪ, ಡಾ. ಕಾಮತ್ ಸೇರಿದಂತೆ 150ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.